
ಉಜಿರೆ: NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್‌ನಲ್ಲಿ ನವೀಕೃತ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗವನ್ನು ಬೆಳ್ತಂಗಡಿಯ ರಾಘವೇಂದ್ರ ನರ್ಸಿಂಗ್ ಹೋಮ್‌ನ ಹಿರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ರೂಪಲತಾ ಎಂ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರೂಪಲತಾ ಎಂ. ಅವರು, “ಮಹಿಳೆಯ ಆರೋಗ್ಯವೇ ಆರೋಗ್ಯವಂತ ಕುಟುಂಬದ ಅಡಿಪಾಯ. ಮಹಿಳೆಯರಿಗೆ ಸಕಾಲದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವುದು ಅತ್ಯಂತ ಮುಖ್ಯ” ಎಂದರು.
ಸ್ತ್ರೀರೋಗ ಮತ್ತು ಪ್ರಸೂತಿ ಚಿಕಿತ್ಸೆಯಲ್ಲಿ ತಾಯಿ ಹಾಗೂ ಮಗುವಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದ ಅವರು, ಗ್ರಾಮೀಣ ಭಾಗದ ಮಹಿಳೆಯರಿಗೆ ತಜ್ಞ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುವಂತೆ ಬೆನಕ ಹೆಲ್ತ್ ಸೆಂಟರ್ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಡಾ. ಅಂಕಿತಾ ಜಿ. ಭಟ್ ಅವರು ಡಾ. ರೂಪಲತಾ ಎಂ. ಅವರನ್ನು ಪರಿಚಯಿಸಿದರು. ಸ್ತ್ರೀರೋಗ ಮತ್ತು ಪ್ರಸೂತಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಡಾ. ರೂಪಲತಾ ಅವರು ಹಲವಾರು ಕ್ಲಿಷ್ಟಕರ ಹೆರಿಗೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆದ್ಯತೆ ನೀಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ, ತಮ್ಮ ಶಿಕ್ಷಣ ಮತ್ತು ವೃತ್ತಿಜೀವನದ ಹಾದಿಯ ಕುರಿತು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಬೆನಕ ಹೆಲ್ತ್ ಸೆಂಟರ್‌ನ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಹಾಗೂ ಸಹ ನಿರ್ದೇಶಕರಾದ ಡಾ. ಭಾರತಿ ಜಿ.ಕೆ. ದಂಪತಿಗಳು ಡಾ. ರೂಪಲತಾ ಎಂ. ಅವರನ್ನು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಬೆನಕ ಹೆಲ್ತ್ ಸೆಂಟರ್‌ನ ನಿರ್ದೇಶಕ ಡಾ. ಗೋಪಾಲಕೃಷ್ಣ ಅವರು, ಉಜಿರೆ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು. ನವೀಕೃತ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮೂಲಕ ಮಹಿಳೆಯರಿಗೆ ಇನ್ನಷ್ಟು ಸುಸಜ್ಜಿತ ಹಾಗೂ ಸಮಗ್ರ ವೈದ್ಯಕೀಯ ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಬೆನಕ ಹೆಲ್ತ್ ಸೆಂಟರ್‌ನ ಸಹ ನಿರ್ದೇಶಕರಾದ ಡಾ. ಭಾರತಿ ಜಿ.ಕೆ. ಅವರು ವಂದನಾರ್ಪಣೆಗೈದರು.
ಈ ಸಂದರ್ಭದಲ್ಲಿ ಡಾ. ಆದಿತ್ಯ ರಾವ್, ಡಾ. ಡೆಂಜಿಲ್ ನರೊನ್ಹ, ಡಾ. ಗೋವಿಂದ್ ಕಿಶೋರ್, ಡಾ. ವಿನಯ ಕಿಶೋರ್, ಡಾ. ರೋಹಿತ್ ಜಿ. ಭಟ್, ಡಾ. ನವ್ಯಾ ಭಟ್, ಡಾ. ಶ್ರೇಯಸ್, ಡಾ. ದೀಪಾಲಿ ಡೋಂಗ್ರೆ ಸೇರಿದಂತೆ ಸಾರ್ವಜನಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.