
ಬೆಳ್ತಂಗಡಿ: ತಾಲೂಕಿನ ಬಳಂಜ ಗ್ರಾಮದ ನಾಲ್ಕೂರು ಪಾಡಿ ಎಂಬಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆಯಾದ ಘಟನೆ ಸೆ. 28ರಂದು ಸಂಜೆ ನಡೆದಿದೆ.
ನಾಲ್ಕೂರು ಗ್ರಾಮದ ಪಾಡಿ ನಿವಾಸಿ ವಿನೋದ ಎಂಬವರ ಕೃಷಿ ತೋಟದಲ್ಲಿ ತಲೆಬುರುಡೆ, ಎಲುಬುಗಳು ಹಾಗೂ ಬಟ್ಟೆ ಸಹಿತ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.
ವಿನೋದ ಅವರ ಜಾಗವನ್ನು ನಾಲ್ಕೂರು ಗ್ರಾಮದ ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಅವರು ನೋಡಿಕೊಳ್ಳುತ್ತಿದ್ದು, ತೋಟದ ಹುಲ್ಲನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುತ್ತಿದ್ದ ವೇಳೆ ಅಸ್ಥಿಪಂಜರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದು ವೇಣೂರು ಠಾಣಾ ಪೊಲೀಸರು ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವೇಣೂರು ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಠಾಣಾ ವ್ಯಾಪ್ತಿಯಲ್ಲಿ ಸದ್ಯ ಯಾವುದೇ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿಲ್ಲ. ಪತ್ತೆಯಾದ ಬಟ್ಟೆಗಳ ಆಧಾರದ ಮೇಲೆ ಇದು ಪುರುಷನ ಅಸ್ಥಿಪಂಜರವಾಗಿರಬಹುದೆಂದು ಶಂಕಿಸಲಾಗಿದೆ.
ಅಸ್ಥಿಪಂಜರ ಯಾರದ್ದು ಎಂಬುದು ಪೊಲೀಸ್ ತನಿಖೆ ಹಾಗೂ ಮುಂದಿನ ವಿಧಿವಿಜ್ಞಾನ ಪರೀಕ್ಷೆಯಿಂದ ತಿಳಿದುಬರಬೇಕಿದೆ.