
ಬಂಟ್ವಾಳ: ಹಾಡಹಗಲೇ ನಿರ್ಜನ ಪ್ರದೇಶದಲ್ಲಿ ಬೈಕ್ ಸವಾರನನ್ನು ಅಡ್ಡಗಟ್ಟಿದ ನಾಲ್ವರು ವ್ಯಕ್ತಿಗಳು ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂ. ಹಣ ದರೋಡೆ ನಡೆಸಿದ ಘಟನೆ ಆ.20ರಂದು ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬಲ್ಲಿ ನಡೆದಿದೆ ಎನ್ನಲಾಗಿದೆ.
ಸುರತ್ಕಲ್ ನಿವಾಸಿ ಮಯ್ಯದಿ ಎಂಬವರು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ವ್ಯಕ್ತಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ತಲವಾರು ತೋರಿಸಿ ಬೆದರಿಸಿ, ಅವರ ಬಳಿಯಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಯ್ಯದಿ ಅವರ ಬ್ಯಾಗ್‌ನಲ್ಲಿ ಸುಮಾರು ₹8 ಲಕ್ಷಕ್ಕೂ ಅಧಿಕ ಹಣವಿತ್ತು ಎನ್ನಲಾಗಿದ್ದು, ಆರೋಪಿಗಳು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯ ಸಂಪೂರ್ಣ ವಿವರಗಳು ಹಾಗೂ ದರೋಡೆಗೊಳಗಾದ ಹಣದ ನಿಖರ ಮೊತ್ತ ಪೊಲೀಸ್ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.