
ಬೆಳ್ತಂಗಡಿ: ಪ.ಜಾತಿ ಮತ್ತು ಪಂಗಡಗಳ ಹಲವು ವರ್ಷಗಳ ಬೇಡಿಕೆಯಾಗಿರುವ ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಕಂದಾಯ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಲು ತಾಲೂಕಿನ ದಲಿತ ನಾಯಕರು ನಿರ್ಧರಿಸಿದ್ದಾರೆ.
ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ದಲಿತ ನಾಯಕರ ಸಭೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆಗಾಗಿ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ ಕುರಿತು ಭರವಸೆ ನೀಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ 2024ರಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರು ಡಿಸಿ ಮನ್ನಾ ಜಮೀನು ಹಂಚಿಕೆ ಕುರಿತು ಆದೇಶ ನೀಡಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆದೇಶ ಇನ್ನೂ ಸಮರ್ಪಕವಾಗಿ ಕಾರ್ಯಗತಗೊಂಡಿಲ್ಲ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಈ ಹಿನ್ನೆಲೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ ಪ್ರಕ್ರಿಯೆಯನ್ನು ಶೀಘ್ರಗೊಳಿಸುವಂತೆ ಒತ್ತಾಯಿಸಿ ರಾಜ್ಯದ ಕಂದಾಯ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ಚರ್ಚಿಸಲು ಸಭೆ ನಿರ್ಧರಿಸಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರಕ್ಕೆ ಈ ಪ್ರಯತ್ನದಿಂದ ವೇಗ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ದಲಿತ ಮುಖಂಡರಾದ ಬಿ.ಕೆ. ವಸಂತ್, ಬೇಬಿ ಸುವರ್ಣ, ವೆಂಕಣ್ಣ ಕೊಯ್ಯೂರು, ಜಯಾನಂದ ಪಿಲಿಕಲ, ನೇಮಿರಾಜ್ ಕಿಲ್ಲೂರು, ಶ್ರೀಧರ್ ಕಳೆಂಜ, ಬಾಬಿ ಮಾಲಾಡಿ, ಸುಕೇಶ್ ಮಾಲಾಡಿ, ಉಮೇಶ್ ಮಾಲಾಡಿ, ನಾರಾಯಣ ಪುದುವೆಟ್ಟು, ಗಣೇಶ್ ಕುಕ್ಕೇಡಿ, ವಿಜಯಕುಮಾರ್ ಬಜಿರೆ, ಎಸ್ಎಂಟಿ ಸುಂದರ್, ಶ್ರೀನಿವಾಸ್ ಉಜಿರೆ, ಯತೀಶ್ ಧರ್ಮಸ್ಥಳ, ರಮೇಶ್ ಗಾಂಧಿನಗರ, ಹರೀಶ್ ಗಾಂಧಿನಗರ, ಗಣೇಶ್ ಧರ್ಮಸ್ಥಳ, ಪರಮೇಶ್ವರ ಅಂಡಿಂಜೆ, ಚರಣ್ ಕುಕ್ಕೇಡಿ, ಉದ್ಯಮಿ ರೋಹಿತ್ ಧರ್ಮಸ್ಥಳ, ಯುವ ನ್ಯಾಯವಾದಿ ಭರತ್ ಉಜಿರೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.