
ಬೆಳ್ತಂಗಡಿ: ಪಶ್ಚಿಮ ಘಟ್ಟ ಸೇರಿದಂತೆ ಅರಣ್ಯ ಸಂರಕ್ಷಣೆಯನ್ನು ಸ್ವಾಗತಿಸುತ್ತೇವೆ. ಆದರೆ ಜನರ ಬದುಕನ್ನೇ ನಾಶಪಡಿಸುವ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ವರದಿಯ ವಿರುದ್ಧ ಜನಜಾಗೃತಿ ಮೂಡಿಸುವುದರ ಜೊತೆಗೆ ತೀವ್ರ ಸ್ವರೂಪದ ಹೋರಾಟಕ್ಕೆ ಜನರು ಮುಂದಾಗಬೇಕು ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ತಾಲೂಕು ಸಂಚಾಲಕ ರಕ್ಷಿತ್ ಶಿವರಾಂ ಕರೆ ನೀಡಿದರು.
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ನೆರಿಯ ಗ್ರಾಮ ಸಮಿತಿ ವತಿಯಿಂದ ನೆರಿಯ ಗ್ರಾಮ ಪಂಚಾಯತ್ ಆವರಣದಲ್ಲಿ ಭಾನುವಾರ ನಡೆದ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಈ ಮಣ್ಣಿನ ಮೂಲನಿವಾಸಿಗಳು ಸೇರಿದಂತೆ ಜನಸಾಮಾನ್ಯರ ಆಚರಣೆ, ಸಂಸ್ಕೃತಿ ಹಾಗೂ ಧಾರ್ಮಿಕ ಬದುಕನ್ನು ನಾಶಪಡಿಸುವ ಈ ವರದಿ ಅತ್ಯಂತ ಅವೈಜ್ಞಾನಿಕವಾಗಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ, ವರದಿಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು” ಎಂದು ಅವರು ಒತ್ತಾಯಿಸಿದರು.
2014ರಿಂದ ಆರು ಬಾರಿ ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರಗಳು ವಿರೋಧಿಸಿದ್ದರೂ, ಮತ್ತೆ ಏಳನೇ ಬಾರಿ ಅಧಿಸೂಚನೆ ಹೊರಡಿಸುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟ್ ಅಧ್ಯಕ್ಷ ಯು.ಸಿ. ಪೌಲೋಸ್ ಮಾತನಾಡಿ, ಕಸ್ತೂರಿರಂಗನ್ ವರದಿ ವಿರುದ್ಧ ಜಾತಿ, ಧರ್ಮ ಹಾಗೂ ಪಕ್ಷದ ಭೇದ ಮರೆತು ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಗಂಡಿಬಾಗಿಲು ಸಂತ ಥೋಮಸ್ ಚರ್ಚ್‌ನ ಧರ್ಮಗುರು ರೆ. ಫಾ. ಬಿನೋಯ್ ಮಾತನಾಡಿ, ವರದಿಯಲ್ಲಿ ಹಲವು ಜನವಿರೋಧಿ ಅಂಶಗಳಿದ್ದು, ಇಂತಹ ವರದಿಯಿಂದ ಜನಸಾಮಾನ್ಯರ ಬದುಕುವ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ. ಇದರ ವಿರುದ್ಧ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು.
ನೆರಿಯ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಮಹಮ್ಮದ್ ಸರ್ವಾಣಿ ಮಾತನಾಡಿ, ಇಂತಹ ಜನವಿರೋಧಿ ವರದಿಯ ವಿರುದ್ಧ ನಾವೆಲ್ಲರೂ ಮನುಷ್ಯರೆಂಬ ಸೌಹಾರ್ದತೆಯಿಂದ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಜಾತಿ, ಧರ್ಮದ ಭೇದಗಳನ್ನು ಬದಿಗಿಟ್ಟು ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಬಿ.ಎಂ. ಭಟ್ ಮಾತನಾಡಿ, ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರ ವಿರೋಧವನ್ನು ಬಲಪಡಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಿರಂತರವಾಗಿ ಜನವಿರೋಧಿ ಕಾನೂನು, ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಜನರ ಜೀವನದೊಂದಿಗೆ ಆಟವಾಡುತ್ತಿದೆ. ಇಂತಹ ನೀತಿಗಳ ವಿರುದ್ಧ ಜನರು ಇನ್ನಷ್ಟು ಪ್ರಬಲ ಹೋರಾಟಕ್ಕೆ ಮುಂದಾಗಬೇಕು ಎಂದರು.
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಗ್ರಾಮ ಸಮಿತಿ ಅಧ್ಯಕ್ಷ ಪಿ.ಕೆ. ರಾಜನ್ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಮಿತಿಯ ತಾಲೂಕು ಸಹ ಸಂಚಾಲಕರಾದ ಲಕ್ಷ್ಮಣ ಆಲಂಗಾಯಿ, ಜಯಾನಂದ ಪಿಲಿಕಲ, ಲಕ್ಷ್ಮಣ ಗೌಡ, ಪಿ.ಟಿ. ಸೆಬಾಸ್ಟಿಯನ್ ಕಳೆಂಜ, ಶೇಖರ್ ಲಾಯಿಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್, ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿ ಮುಖ್ಯಸ್ಥರಾದ ಜಯದೇವ್, ಕೃಷ್ಣ ಬಾಂಜಾರು, ರುಕ್ಮಯ್ಯ ಗೌಡ, ಗಿರೀಶ್ ನೆಕ್ಕರೆ, ಮಂಜಪ್ಪ ಕೋಲೋಡಿ, ಸುಧಾಕರ ಆಲಂಗಾಯಿ, ಕಾಂತಪ್ಪ ಆಲಂಗಾಯಿ, ಶಂಕರ್ ಅಂಬಟೆಮಲೆ, ಕು. ಪುಷ್ಪ ಕಾಟಾಜೆ, ವಿ.ಡಿ. ಥೋಮಸ್ ಹಾಗೂ ರಮೇಶ್ ಕೆ.ಎಸ್. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಗ್ರಾಮ ಸಮಿತಿ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ. ನಿರೂಪಿಸಿದರು. ತಾಲೂಕು ಸಹ ಸಂಚಾಲಕ ಬಿ. ಅಶ್ರಫ್ ನೆರಿಯ ಧನ್ಯವಾದ ಸಲ್ಲಿಸಿದರು.