
ಬೆಂಗಳೂರು: ರಾಜ್ಯಾದ್ಯಂತ ಮಾದಕ ದ್ರವ್ಯದ ಜಾಲದ ವಿರುದ್ಧ ಪೊಲೀಸರು ನಿರಂತರ ಸಮರ ನಡೆಸುತಿದ್ದರೂ ಮಾದಕ ಪದಾರ್ಥಗಳ ಹಾವಳಿ ಮಾತ್ರ ಕಡಿಮೆಯಾಗಿಲ್ಲ. ಈ ವರ್ಷ ಜನವರಿಯಿಂದ ಮೇ ತಿಂಗಳವರೆಗಿನ ಅಂಕಿ-ಅಂಶಗಳ ಮೂಲಕ ಡ್ರಗ್ಸ್ ಹಾವಳಿ ಎಲ್ಲೆಲ್ಲಿ ಹೆಚ್ಚಾಗಿದೆ ಮತ್ತು ಪೊಲೀಸರ ಕಾರ್ಯಾಚರಣೆ ಹೇಗೆ ನಡೆದಿದೆ ಎಂಬ ವಿವರ ಹೀಗಿದೆ. ರಾಜ್ಯದಲ್ಲಿ ಮೇ ತಿಂಗಳ ಅಂತ್ಯದವರೆಗೆ ದಾಖಲಾದ ಮಾದಕ ದ್ರವ್ಯ ಪ್ರಕರಣಗಳ ತಿಂಗಳವಾರು ವರದಿ ಹಾಗೂ ಅತಿ ಹೆಚ್ಚು ಪ್ರಕರಣ ದಾಖಲಾದ ‘ಟಾಪ್ 3’ ಜಿಲ್ಲೆಗಳ ಸಂಪೂರ್ಣ ವಿವರ ಇಲ್ಲಿದೆ.
ತಿಂಗಳವಾರು ಡ್ರಗ್ಸ್ ಪ್ರಕರಣಗಳ ಹೈಲೈಟ್ಸ್:
ಜನವರಿ (ಒಟ್ಟು ಪ್ರಕರಣಗಳು: 1,397): ವರ್ಷದ ಆರಂಭದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ 841 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು (93) ಮತ್ತು ಕರ್ನಾಟಕ ರೈಲ್ವೆ ಪೊಲೀಸ್ (63) ವ್ಯಾಪ್ತಿಯಲ್ಲಿ ಗಮನಾರ್ಹ ಪ್ರಕರಣಗಳು ದಾಖಲಾಗಿವೆ. ದಾವಣಗೆರೆಯಲ್ಲಿ 37 ಪ್ರಕರಣಗಳು ಪತ್ತೆಯಾಗಿವೆ.
ಫೆಬ್ರುವರಿ (ಒಟ್ಟು ಪ್ರಕರಣಗಳು – 980): ಫೆಬ್ರುವರಿಯಲ್ಲಿ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದ್ದರೂ, ಬೆಂಗಳೂರು ನಗರದಲ್ಲಿ 441 ಪ್ರಕರಣಗಳು ದಾಖಲಾಗಿವೆ. ಮಂಗಳೂರು (66) ಮತ್ತು ಶಿವಮೊಗ್ಗ (52) ನಂತರದ ಸ್ಥಾನದಲ್ಲಿವೆ.
ಮಾರ್ಚ್ (ಒಟ್ಟು ಪ್ರಕರಣಗಳು – 1,017): ಮಾರ್ಚ್ ತಿಂಗಳಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದೆ. ಬೆಂಗಳೂರು ನಗರ (344) ಮೊದಲ ಸ್ಥಾನದಲ್ಲಿದ್ದರೆ, ಈ ತಿಂಗಳು ಶಿವಮೊಗ್ಗದಲ್ಲಿ ಬರೋಬ್ಬರಿ 128 ಪ್ರಕರಣಗಳು ದಾಖಲಾಗಿವೆ. ಮಂಗಳೂರಿನಲ್ಲಿ 58 ಪ್ರಕರಣಗಳು ವರದಿಯಾಗಿವೆ.
ಏಪ್ರಿಲ್ (ಒಟ್ಟು ಪ್ರಕರಣಗಳು – 940): ಎಪ್ರಿಲ್‌ನಲ್ಲಿ ಬೆಂಗಳೂರು ನಗರ (373) ಮುಂಚೂಣಿಯಲ್ಲಿದ್ದರೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 70 ಮತ್ತು ಶಿವಮೊಗ್ಗದಲ್ಲಿ 62 ಪ್ರಕರಣಗಳು ದಾಖಲಾಗಿವೆ.
ಮೇ (ಒಟ್ಟು ಪ್ರಕರಣಗಳು – 813): ಮೇ ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 813ಕ್ಕೆ ಇಳಿಕೆಯಾಗಿದೆ. ಇದರಲ್ಲಿ ಬೆಂಗಳೂರು ನಗರ (352), ಮಂಗಳೂರು (89), ರಾಯಚೂರು (39) ಮತ್ತು ದಾವಣಗೆರೆ (29) ಜಿಲ್ಲೆಗಳು ಪ್ರಮುಖವಾಗಿವೆ.
ಬೆಂಗಳೂರು ನಗರ (ಮೊದಲ ಸ್ಥಾನ): ಐಟಿ ಹಬ್, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಮತ್ತು ಸಪ್ಲೈ ನೆಟ್‌ವರ್ಕ್ ದೊಡ್ಡದಾಗಿರುವುದರಿಂದ ಐದೂ ತಿಂಗಳುಗಳಲ್ಲೂ ಬೆಂಗಳೂರೇ ಮೊದಲ ಸ್ಥಾನದಲ್ಲಿದೆ. (5 ತಿಂಗಳ ಒಟ್ಟು ಪ್ರಕರಣಗಳು – 2,351)
ಮಂಗಳೂರು /ದಕ್ಷಿಣ ಕನ್ನಡ (ಎರಡನೇ ಸ್ಥಾನ): ಶೈಕ್ಷಣಿಕ ಕೇಂದ್ರವಾಗಿರುವ ಮಂಗಳೂರಿನಲ್ಲಿ ಫೆಬ್ರುವರಿ, ಮಾರ್ಚ್ ಮತ್ತು ಮೇ ತಿಂಗಳುಗಳಲ್ಲಿ ಭಾರಿ ಪ್ರಮಾಣದ ಪ್ರಕರಣಗಳು ದಾಖಲಾಗಿದ್ದು, ಎರಡನೇ ಪ್ರಮುಖ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
ಶಿವಮೊಗ್ಗ (ಮೂರನೇ ಸ್ಥಾನ): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮಾರ್ಚ್ (128) ಮತ್ತು ಏಪ್ರಿಲ್ (62) ತಿಂಗಳುಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಮೂಡಿಸಿದೆ.
ಜನವರಿಯಲ್ಲಿ ಒಟ್ಟು 1,397 ಪ್ರಕರಣಗಳಿದ್ದದ್ದು, ಮೇ ತಿಂಗಳ ವೇಳೆಗೆ 813ಕ್ಕೆ ಕುಸಿದಿದೆ. ಇದು ಪೊಲೀಸ್ ಇಲಾಖೆಯ ಬಿಗಿ ಕಾರ್ಯಾಚರಣೆ ಮತ್ತು ಕಠಿಣ ನಿಗಾಕ್ಕೆ ಸಾಕ್ಷಿಯಾಗಿದೆ. ಆದರೂ ಯುವ ಪೀಳಿಗೆಯನ್ನು ಬಲಿ ತೆಗೆದುಕೊಳ್ಳುತ್ತಿರುವ ಈ ಕರಾಳ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.