25 ಸೆಂಟ್ಸ್‌ವರೆಗಿನ ನಿವೇಶನಗಳಿಗೆ ಸ್ಥಳೀಯ ಸಂಸ್ಥೆಗಳಿಂದಲೇ ಖಾತಾ, ವಿನ್ಯಾಸ ಅನುಮೋದನೆ ಸರ್ಕಾರದ ನಿರ್ಧಾರಕ್ಕೆ ಜಗದೀಶ್ ಡಿ. ಅಭಿನಂದನೆ

 

 

ಬೆಳ್ತಂಗಡಿ:  ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 25 ಸೆಂಟ್ಸ್‌ (1000 ಚದರ ಮೀಟರ್) ವರೆಗಿನ ನಿವೇಶನಗಳಿಗೆ ವಿನ್ಯಾಸ ಅನುಮೋದನೆ ಹಾಗೂ 9/11 ಮತ್ತು ಖಾತಾ ನೀಡುವ ಅಧಿಕಾರವನ್ನು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಪಟ್ಟಣ ಪಂಚಾಯತ್ ಮಾಜಿ ಹಿರಿಯ ಸದಸ್ಯ ಹಾಗೂ ಕೆಡಿಪಿ ಸದಸ್ಯ ಡಿ. ಜಗದೀಶ್, ಸರ್ಕಾರಕ್ಕೆ ಅಭಿನಂದನೆ ಹಾಗೂ ಧನ್ಯವಾದ ಸಲ್ಲಿಸಿದ್ದಾರೆ.

ಸೆ. 26ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2017-18ರಲ್ಲಿ ನೀಡಲಾಗಿದ್ದ ಫಾರ್ಮ್-3 ರದ್ದುಪಡಿಸಿ, 2018ರಿಂದ 2024ರವರೆಗೆ ಮೂಡಾ ಪ್ರಾಧಿಕಾರದಿಂದ ಅನುಮೋದಿತ ವಿನ್ಯಾಸ ನಕ್ಷೆ ಪಡೆದು ನಮೂನೆ-3 ಪಡೆಯಬೇಕೆಂಬ ನಿಯಮದಿಂದಾಗಿ ಹಲವು ಮಂದಿ ಸಮಸ್ಯೆ ಎದುರಿಸುತ್ತಿದ್ದರು ಎಂದರು.

ಕಟ್ ಕನ್ವರ್ಷನ್ ಮೂಲಕ ನಿವೇಶನ ಖರೀದಿಸಿದ್ದವರಿಗೆ ಖಾತಾ ದೊರೆಯದ ಹಿನ್ನೆಲೆಯಲ್ಲಿ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ವಿವಿಧ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಗಿತ್ತು. ಬೆಳ್ತಂಗಡಿಯ ಮೂಡಾ ಫಾರ್ಮ್-3 ಹಾಗೂ ಕಟ್ ಕನ್ವರ್ಷನ್ ನಿವೇಶನಗಳ ಸಮಸ್ಯೆ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿಯೂ ಧ್ವನಿ ಎತ್ತಲಾಗಿತ್ತು ಎಂದು ಅವರು ಹೇಳಿದರು.

ಇದರ ಪರಿಣಾಮವಾಗಿ 2025ರಲ್ಲಿ ಬಿ-ಖಾತಾ ನೀಡಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಬಿ-ಖಾತಾ ಹೊಂದಿದ್ದವರಿಗೆ ನಿವೇಶನ ಮಾರಾಟ ಮಾಡಲು ಸಾಧ್ಯವಾಗುತ್ತಿದ್ದರೂ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಹಾಗೂ ಕಟ್ಟಡ ಪರವಾನಿಗೆ ಪಡೆಯಲು ತೊಂದರೆ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ವಿಭಜಿತ ಕಟ್ ಕನ್ವರ್ಷನ್ ನಿವೇಶನಗಳಿಗೆ ಎ-ಖಾತಾ ನೀಡುವಂತೆ ಪಟ್ಟಣ ಪಂಚಾಯತ್ ಹಾಗೂ ಸಾರ್ವಜನಿಕರ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದರು.

ಇದೀಗ 25 ಸೆಂಟ್ಸ್‌ವರೆಗಿನ ನಿವೇಶನಗಳಿಗೆ ವಿನ್ಯಾಸ ಅನುಮೋದನೆ, 9/11 ಹಾಗೂ ಖಾತಾ ನೀಡುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿರುವುದು ಬೆಳ್ತಂಗಡಿ ಜನತೆಗೆ ಅನುಕೂಲಕರ ನಿರ್ಧಾರವಾಗಿದೆ. ಇನ್ನು ಮುಂದೆ ನಗರ ವ್ಯಾಪ್ತಿಯ ನಾಗರಿಕರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಂದಲೇ ವಿನ್ಯಾಸ ನಕ್ಷೆ ಹಾಗೂ ನಮೂನೆ-3 ಪಡೆಯಲು ಅವಕಾಶ ದೊರೆಯಲಿದೆ ಎಂದು ಜಗದೀಶ್ ತಿಳಿಸಿದರು.

ಈ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ, ನಗರಾಭಿವೃದ್ಧಿ ಹಾಗೂ ನಗರ-ಯೋಜನಾ ಸಚಿವ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಕ್ಕೆ ಬೆಳ್ತಂಗಡಿ ತಾಲೂಕಿನ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.

ತುಳು ಭಾಷೆಯನ್ನು ಕರ್ನಾಟಕದ ಎರಡನೇ ಭಾಷೆಯಾಗಿ ಘೋಷಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಜಗದೀಶ್ ಧನ್ಯವಾದ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ವಸಂತ, ಮಾಜಿ ಸದಸ್ಯ ಜೇಮ್ಸ್ ಡಿ’ಸೋಜ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್, ಮಾಜಿ ಯೋಧ ಮೊಹಮ್ಮದ್ ರಫಿ ಹಾಗೂ ಹರೀಶ್ ಕೆ. ಉಪಸ್ಥಿತರಿದ್ದರು.

error: Content is protected !!