ದಿಡುಪೆ ಜಲಪಾತ ಭೇಟಿ ರಶೀದಿ ಕೇಳಿದ ಪ್ರವಾಸಿಗರ ವಿರುದ್ಧ ಎಫ್ಐಆರ್:ಹೈಕೋರ್ಟ್ ಅಸಾಮಾಧಾನ: ವಿಚಾರಣೆಗೆ ಅಧಿಕಾರಿಗಳು ಖುದ್ದು ಹಾಜರಾಗಲು ಸೂಚನೆ:

 

 

 

ಬೆಂಗಳೂರು: ಬೆಳ್ತಂಗಡಿ ತಾಲೂಕಿನ ದಿಡುಪೆ ಸಮೀಪದ  ಜಲಪಾತಕ್ಕೆ ವೀಕ್ಷಣೆಗೆ ಬಂದಿದ್ದ ವೇಳೆ  ಪಾವತಿಸಿದ ಪ್ರವೇಶ ಶುಲ್ಕಕ್ಕೆ ಡಿಜಿಟಲ್ ಬಿಲ್  ಕೇಳಿದ್ದ ಪ್ರವಾಸಿಗರಿಗೆ ದಂಡ ಪಾವತಿ ರಸೀದಿ ನೀಡಿದ್ದಲ್ಲದೆ, ಹಲ್ಲೆ ಮತ್ತು 50 ಸಾವಿರದ 500 ರೂಪಾಯಿ ನಗದು ಹಣ ಕಿತ್ತುಕೊಂಡ ಆರೋಪದ ಮೇಲೆ ಎಫ್ಐಆರ್ ದಾಖಲಿಸಿರುವ ಪ್ರಕರಣದಲ್ಲಿ ಹೈಕೋರ್ಟ್​ ತೀವ್ರ ಅಸಮಧಾನ ವ್ಯಕ್ತಪಡಿಸಿದೆ. ಈ ಪ್ರಕರಣದ ಕುರಿತ ವಿವರಣೆ ನೀಡಲು ನವೆಂಬರ್​ 6ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಂಗಳೂರು ವಲಯ ಅರಣ್ಯಾಧಿಕಾರಿಗೆ ಸೂಚಿಸಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರಿನ ಎಸ್. ಪ್ರತಾಪ್ ಸೇರಿ ಐವರು ಯುವಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಘಟನೆ ಕುರಿತು ಸಾಕ್ಷ್ಯ ಹೇಳಲು ಸ್ಥಳದಲ್ಲಿ ಸ್ವತಂತ್ರ ಸಾಕ್ಷಿ ಇಲ್ಲವಾಗಿದ್ದು, ಅರ್ಜಿದಾರರನ್ನು ಮಂಪರು ಪರೀಕ್ಷೆ ನಡೆಸಲು ಸೂಚಿಸಿರುವ ಬೆಳ್ತಂಗಡಿ ಠಾಣೆಯ ತನಿಖಾಧಿಕಾರಿ ಸಹ ಅರ್ಜಿಯ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿರುವ ಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್​ಗೆ ತಡೆಯಾಜ್ಞೆ ನೀಡಿದೆ.

ಪ್ರಕರಣದಲ್ಲಿ ಪ್ರವೇಶ ಶುಲ್ಕ ಪಾವತಿಸಿರುವುದಕ್ಕೆ ಡಿಜಿಟಲ್ ಮತ್ತು ಕೈಬರಹ ನೀಡಲು ಅರ್ಜಿದಾರರು ಕೇಳಿದ್ದಕ್ಕೆ; ಬಿಲ್ಲಿಂಗ್ ಮೆಷಿನ್ ಹಾಳಾಗಿದೆ. ಕೈ ಬರಹ ಬಿಲ್ ಇಲ್ಲವಾಗಿದೆ ಎಂದು ಹೇಳಿ ದಂಡ ಪಾವತಿ ರಸೀದಿ ನೀಡಿದ ಮತ್ತು ಬಿಲ್ಲಿಂಗ್ ಕೌಂಟರ್​ನಲ್ಲಿ ಅರಣ್ಯ ವಾಚರ್ ಹಣ ಸ್ವಿಕರಿಸುತ್ತಿದ್ದ ವಿಚಾರಕ್ಕೆ ನ್ಯಾಯಮೂರ್ತಿಗಳು ಇದೇ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೆಳೆ ಸರ್ಕಾರಿ ವಕೀಲರನ್ನು ಉದ್ದೇಶಿಸಿ, ಡಿಜಿಟಲ್ ಬಿಲ್ ಕೇಳಿದರೆ ಬಿಲ್ಲಿಂಗ್ ಮಷಿನ್ ಕೆಟ್ಟಿದೆ ಅಂತೀರಾ. ಹೋಗಲಿ ಮ್ಯಾನ್ಯುವಲ್ ಬಿಲ್ ಕೇಳಿದರೆ ದಂಡ ಪಾವತಿ ರಸೀದಿ ಕೊಡ್ತೀರಾ? ಶುಲ್ಕ ಪಾವತಿ ರಸೀದಿ ಇಲ್ಲವೆಂದರೆ ಪ್ರವಾಸಿಗರು ಪಾವತಿಸಿದ ದುಡ್ಡು ಎಲ್ಲಿಗೆ ಹೋಗುತ್ತಿದೆ? ಪ್ರವಾಸಿಗರು ಪ್ರೇಕ್ಷಣಿಯ ಸ್ಥಳಕ್ಕೆ ಬಂದರೆ ದಂಡ ವಿಧಿಸುತ್ತೀರಾ? ಬಿಲ್ಲಿಂಗ್ ಕೌಂಟರ್ ಅಲ್ಲಿ ಅರಣ್ಯ ವಾಚರ್ ಕೆಲಸ ಮಾಡುತ್ತಾರಾ? ಏನ್ರಿ ಇದೆಲ್ಲಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಅಲ್ಲದೆ, ದಿನಕ್ಕೆ ನೂರಾರು ಪ್ರವಾಸಿಗರು ಜಲಪಾತ ನೋಡಲು ಬರುತ್ತಾರೆ. ಅವರಿಂದ ಸಂಗ್ರಹಿಸಿದ ಶುಲ್ಕಕ್ಕೆ ಎಲ್ಲಿದೆ ಲೆಕ್ಕ? ದುಡ್ಡು ಸರ್ಕಾರಕ್ಕೆ ಹೋಗುತ್ತಿದೆಯೇ ಎನ್ನುವುದೇ ಅನುಮಾನ. ಡಿಜಿಟಲ್ ಬಿಲ್ ಕೇಳಿರುವುದಕ್ಕೆ ಅರ್ಜಿದಾರರ ಮೇಲೆಯೇ ದೂರು ದಾಖಲಿಸುವುದೇ? ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇವರು ಬ್ರಿಟಿಷ್ ಪಳಯುಳಿಕೆಯಾಗಿದ್ದಾರೆ ಎಂದು ಪೀಠ ಅಸಮಾಧಾನದಿಂದ ನುಡಿದಿದೆ.

ಪ್ರಕರಣದ ಹಿನ್ನೆಲೆ : ಅರ್ಜಿದಾರರು ಮತ್ತವರ 15 ಮಂದಿ ಸ್ನೇಹಿತರು 2026ರ ಜುಲೈ 19ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರವೇಶ ಶುಲ್ಕ ಒಬ್ಬೊಬ್ಬರಿಗೆ ತಲಾ 200 ರೂಪಾಯಿನಂತೆ ಒಟ್ಟು ಮೂರು ಸಾವಿರ ರೂಪಾಯಿ ಪ್ರವೇಶ ಶುಲ್ಕ ಪಾವತಿಸಿದ್ದರು. ಅರ್ಜಿದಾರರು ಕೇಳಿದರೂ ಸ್ಥಳದಲ್ಲಿ ಕರ್ತವ್ಯನಿರತ ಸಿಬ್ಬಂದಿ ಭರತೇಶ್ ಡಿಜಿಟಲ್ ಬಿಲ್ ಕೊಟ್ಟಿರಲಿಲ್ಲ. ಇದೇ ಅರ್ಜಿದಾರರು ಮತ್ತು ಭರತೇಶ್ ನಡುವೆ ವಾಗ್ವಾದ ನಡೆದಿತ್ತು. ನಂತರ ಅರಣ್ಯ ವಾಚರ್ ಗೋಪಾಲ್, ಬೆಳ್ತಂಗಡಿ ಪೊಲೀಸ್ ಠಾಣೆಗೆ ಅರ್ಜಿದಾರರು ಭರತೇಶ್ ಮೇಲೆ ಹಲ್ಲೆ ನಡೆಸಿ; ಅವರ ಕೈಯಿಂದ 50500 ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋದ ಆರೋಪದ ಮೇಲೆ ದೂರು ನೀಡಿದ್ದರು. ಇದರಿಂದ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

error: Content is protected !!