
ಸುಳ್ಯ: ಒಂದೇ ಮನೆಯ ಐದು ವರ್ಷದ ಇಬ್ಬರು ಅವಳಿ ಸಹೋದರರು ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಳ್ಯ ಗ್ರಾಮದ ಕಡೀರದಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತ ಬಾಲಕರು ಮುರುಳ್ಯ ಗ್ರಾಮದ ಕಡೀರ ನಿವಾಸಿ ವಸಂತ್ ಅವರ ಇಬ್ಬರು ಪುತ್ರರು ಎಂದು ತಿಳಿದುಬಂದಿದೆ. ವಸಂತ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಶನಿವಾರ ಮಧ್ಯಾಹ್ನ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು. ಸಂಜೆ ವೇಳೆಗೆ ವಸಂತ್ ಹಾಗೂ ಅವರ ಪತ್ನಿ ಮನೆಯ ಸಮೀಪದ ತೋಟದಲ್ಲಿ ಕೆಲಸ ಮಾಡಲು ತೆರಳಿದ್ದು, ಮಕ್ಕಳು ಮನೆಯಲ್ಲಿಯೇ ಇದ್ದರು. ಬಳಿಕ ಕೆಲಸ ಮುಗಿಸಿ ವಸಂತ್ ಅವರ ಪತ್ನಿ ಮನೆಗೆ ಮರಳಿದಾಗ ಮಕ್ಕಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಆತಂಕಗೊಂಡ ಪೋಷಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಮಕ್ಕಳು ಪತ್ತೆಯಾಗಲಿಲ್ಲ. ನಂತರ ಮನೆ ಸಮೀಪದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಈ ದೃಶ್ಯ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಟವಾಡುತ್ತಿದ್ದ ವೇಳೆ ಮಕ್ಕಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ವಸಂತ್ ಅವರು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಠಾಣೆಯಲ್ಲಿ ಅ.ಕ್ರ. 22/2026, ಕಲಂ 194 BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.