ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ: ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆ ದೂರು

 

 

ಬೆಳ್ತಂಗಡಿ: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬಂಗ್ಲಗುಡ್ಡೆ ರಕ್ಷಿತಾರಣ್ಯಕ್ಕೆ ಪೂರ್ವಾನುಮತಿ ಪಡೆಯದೆ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಹಿನ್ನೆಲೆಯಲ್ಲಿ, ಅನುಮತಿ ಪಡೆಯದೆ ರಕ್ಷಿತಾರಣ್ಯ ಪ್ರವೇಶಿಸಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಇಬ್ಬರು ಯುವಕರು ಪೊಲೀಸ್ ಠಾಣೆಗೆ ಬಂದ ಸಂದರ್ಭದಲ್ಲಿ, ಅವರ ಮೇಲೆ ಯಾವುದೇ ರೀತಿಯ ಹಲ್ಲೆ ಅಥವಾ ತೊಂದರೆ ನಡೆದಿದ್ದರೆ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯುವಕರು, ಈ ಬಗ್ಗೆ ಚರ್ಚಿಸಿ ಅಗತ್ಯವಿದ್ದಲ್ಲಿ ದೂರು ನೀಡುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಯುವಕರ ಮೇಲೆ ಹಲ್ಲೆ ಅಥವಾ ಇತರೆ ತೊಂದರೆ ನೀಡಿದ ಕುರಿತು ಪ್ರಸ್ತುತ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

error: Content is protected !!