ಧರ್ಮಸ್ಥಳ ಬುರುಡೆ ಪ್ರಕರಣ ತನಿಖಾ ವರದಿ ಬಹಿರಂಗಕ್ಕೆ ಚಿನ್ನಯ್ಯ ಅರ್ಜಿ; ಸರ್ಕಾರ,ಹಾಗೂ ಎಸ್.ಐ.ಟಿ. ಗೆ, ಹೈಕೋರ್ಟ್ ನೋಟಿಸ್:

 

 

ಬೆಂಗಳೂರು: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ತನಿಖಾ ವರದಿ ಬಹಿರಂಗಪಡಿಸುವಂತೆ ಕೋರಿ ದೂರುದಾರ ಚಿನ್ನಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ ಮತ್ತು ವಿಶೇಷ ತನಿಖಾ ದಳ(ಎಸ್ಐಟಿ)ಕ್ಕೆ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ತನಿಖೆಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಲು ಎಸ್ಐಟಿಗೆ ಸೂಚನೆ ನೀಡಬೇಕೆಂದು ಕೋರಿ ಸಿ.ಎನ್.ಚಿನ್ನ (ಚಿನ್ನಯ್ಯ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಅಲಿಸಿದ ಬಳಿಕ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಎಸ್ಐಟಿ ತನಿಖೆಯ ಸ್ಥಿತಿಗತಿಯ ಕುರಿತು ವಿವರ ಒದಗಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಜೂ.29ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ದೂರುದಾರರ ಪರ ವಕೀಲರು, ನಿಜವಾದ ಆರೋಪಿಗಳನ್ನು ಹೆಸರಿಸಿದ್ದರೂ ಎಸ್ಐಟಿ ಕ್ರಮ ಕೈಗೊಂಡಿಲ್ಲ. ಪ್ರಾಥಮಿಕ ವರದಿಯಲ್ಲಿರುವವರ ಮೇಲೆ ಸರಿಯಾದ ತನಿಖೆ ನಡೆದಿಲ್ಲ. ಇಷ್ಟು ದಿನಗಳಾದರೂ ಎಸ್ಐಟಿ ಎಫ್ಐಆರ್ ನಂ.39/2025ರ ತನಿಖೆ ಪೂರ್ಣಗೊಳಿಸಿಲ್ಲ. ಹಾಗಾಗಿ, ಎಸ್ಐಟಿ ಹಾಗೂ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದರು.

ತನ್ನನ್ನು ಬಳಸಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ- ಚಿನ್ನಯ್ಯ: ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ತಿಳಿಸಿರುವ ಚಿನ್ನಯ್ಯ, ಎಸ್ಐಟಿ ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಈ ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರಗಳ ಬಗ್ಗೆಯೂ ವಿವರವಾಗಿ ಉಲ್ಲೇಖಿಸಲಾಗಿದೆ. ನಟ ಪ್ರಕಾಶ್ ರಾಜ್ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

 

ಅರ್ಜಿಯ ಸಾರಾಂಶ ಹೀಗಿದೆ..:

ವಿಠಲ ಗೌಡ ತಮ್ಮನ್ನು ಮಹೇಶ್ ಶೆಟ್ಟಿ ತಿಮರೋಡಿಗೆ ಪರಿಚಯಿಸಿದರು. ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ದಹನ ಮಾಡಲಾಗಿದೆ ಎಂದಿದ್ದರು. ನಂತರ ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ, ಗಣೇಶ್ ಮತ್ತಿತರರು ಕೇರಳ, ತಮಿಳುನಾಡು ಸೇರಿ ಹಲವೆಡೆ ಕರೆದೊಯ್ದರು. ಆಗಿಂದಾಗ್ಗೆ 5 ಸಾವಿರ, 15 ಸಾವಿರ ರೂ ಹಣ ನೀಡುತ್ತಿದ್ದರು. ಬೆಂಗಳೂರಿನ ಜಯಂತ್ ಮನೆಗೆ ಕರೆದೊಯ್ದು ತಲೆ ಬುರುಡೆ ಕೊಟ್ಟು ಕೈಯಲ್ಲಿ ಹಿಡಿದುಕೊಳ್ಳುವಂತೆ ಸೂಚಿಸಿ ಫೋಟೋ ತೆಗೆದುಕೊಂಡರು. ನಂತರ ಸುಜಾತಾ ಭಟ್ ಆವರೊಂದಿಗೆ ಗಿರೀಶ್ ಮಟ್ಟಣ್ಣನವರ್ ತಮ್ಮನ್ನೂ ಸುಪ್ರೀಂಕೋರ್ಟ್‌ಗೆ ಕರೆದೊಯ್ದರು. ನಂತರ ಉಜಿರೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಕೂಡಿ ಹಾಕಲಾಗಿತ್ತು. ಸಂಜೆ ವೇಳೆ ಗಿರೀಶ್ ಮಟ್ಟಣ್ಣನವರ್ ತಲೆ, ಕಾಲುಗಳನ್ನು ಮಸಾಜ್ ಮಾಡಲು, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೂ ಮಸಾಜ್ ಮಾಡಲು ಒತ್ತಾಯಿಸಲಾಗುತ್ತಿತ್ತು. ವಕೀಲರು ಹೇಳಿದಂತೆ ಕೋರ್ಟ್‌ಗೆ ಹೇಳದೇ ಇದ್ದರೆ ಕೊಂದು ಅದೇ ಜಾಗದಲ್ಲಿ ಹೂಳುವುದಾಗಿಯೂ ಬೆದರಿಸಿದ್ದರು.

‘ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ₹50 ಲಕ್ಷ ಭರವಸೆ’: ನೀಡುವುದಾಗಿ ಭರವಸೆ ನೀಡಿದರು ಸಮೀರ್ ಎಂ.ಡಿ, ಅಜಯ್ ಅವರ ಯೂಟ್ಯೂಬ್ ಚಾನಲ್‌ಗಳಲ್ಲಿ ಅವರ ಸೂಚನೆಯಂತೆ ಹೇಳಿಸಿ ರೆಕಾರ್ಡ್ ಮಾಡಿಸಲಾಯಿತು. ತಲೆ ಬುರುಡೆ ನೀಡಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಕೇರಳದ ರೆಸಾರ್ಟ್‌ಗೆ ಕರೆದೊಯ್ದರು. ಅಲ್ಲಿ ನಟ ಪ್ರಕಾಶ್ ರಾಜ್ ಅವರಿಗೆ ಕರೆ ಮಾಡಿ ಅರ್ಜಿದಾರರಿಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣನವರ್ ಹೇಳಿಕೊಟ್ಟಂತೆ ಹೇಳಿಕೆ ನೀಡಬೇಕು. ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಬಂಗಲೆಗುಡ್ಡದ ಸ್ಥಳ ಗುರುತಿಸಿ ಅಲ್ಲಿ ಉತ್ಖನನ ನಡೆಸಿ ಸರ್ಕಾರದ ಹಣ ವ್ಯಯ ಮಾಡಿಸುವಂತೆ ಸೂಚಿಸಿದರು. ಯೋಜನೆಯ ಬಜೆಟ್ 200 ಕೋಟಿ ರೂ ಇದ್ದು, ವೀರೇಂದ್ರ ಹೆಗ್ಗಡೆ ಅವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ 50 ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದರು.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್, ದಿನೇಶ್ ಅವರು ಹೇಳಿದ ಜಾಗಗಳನ್ನು ಎಸ್ಐಟಿಗೆ ತೋರಿಸುವಂತೆ ಸೂಚಿಸಿ ಹಾಗೆ ಮಾಡದಿದ್ದರೆ ತಮ್ಮ ಪತ್ನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಧರ್ಮಸ್ಥಳದ ವಿರುದ್ಧ ಇವರ ಷಡ್ಯಂತ್ರದಿಂದ ಭಯಭೀತನಾಗಿ ಸತ್ಯ ಹೇಳಲು ತೀರ್ಮಾನಿಸಿದೆ. ನಂತರ ಎಸ್ಐಟಿ ಮುಂದೆ ಷಡ್ಯಂತ್ರದ ಹೇಳಿಕೆ ನೀಡಿದೆ ಎಂದು ದೂರಿನಲ್ಲಿ ಚಿನ್ನಯ್ಯ ವಿವರಿಸಿದ್ದಾರೆ.

error: Content is protected !!