ಮಂಜು ಇಂಡೇನ್ ಗ್ಯಾಸ್‌ ಏಜೆನ್ಸಿಯ ವಿರುದ್ಧ ಗ್ರಾಹಕರ ಅಸಮಾಧಾನ: ಜಿಲ್ಲಾಧಿಕಾರಿ, ಸೇರಿದಂತೆ ಪೊಲೀಸರಿಗೆ ಬಳಕೆದಾರರಿಂದ ದೂರು:.

 

 

ಬೆಳ್ತಂಗಡಿ : ಲಾಯಿಲದಲ್ಲಿ ಕಛೇರಿ ಹೊಂದಿರುವ ಮಂಜು ಇಂಡೇನ್ ಗ್ಯಾಸ್ ಏಜೆನ್ಸಿಯು ಸರಿಯಾದ ರೀತಿಯಲ್ಲಿ ಗ್ಯಾಸ್ ಸಿಲಿಂಡರ್ ನೀಡದೇ ಸತಾಯಿಸುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ನ್ಯಾಯ ಒದಗಿಸುವಂತೆ ಗುರುವಾಯನಕೆರೆ ನಿವಾಸಿಗಳಾದ ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಹಾಗೂ ಮಹಮ್ಮದ್ ರಫೀಕ್ ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದಾರೆ.
ಅವರ ವಿತರಣಾ ವ್ಯವಸ್ಥೆಯಂತೆ ತಿಂಗಳು ಕಳೆದ ಬಳಿಕ ಗ್ಯಾಸ್ ಬುಕ್ ಮಾಡಿದರೂ ಸಿಲಿಂಡರ್ ನೀಡುತ್ತಿಲ್ಲ. ಬಡವರಾದ ನಮಗೆ ಅಡುಗೆಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೂ ಅವರು ಮಾಡುತ್ತಿಲ್ಲ. ಬದಲಾಗಿ ನಾವೇ ಅವರ ಕಛೇರಿಗೆ ಹೋಗಿ ಗ್ಯಾಸ್ ಬುಕ್ ಮಾಡಿ ರಶೀದಿ ಮಾಡಿದ ಬಳಿಕ ೧೦-೨೦ ದಿನಗಳ ಬಳಿಕ ಅವರ ಗೋದಾಮಿಗೆ ಹೋಗಿ ಸಿಲಿಂಡರ್ ಪಡೆಯಬೇಕಾಗಿದೆ. ಬೆಳ್ತಂಗಡಿಯಿಂದ ಮದ್ದಡ್ಕ- ಪಡಂಗಡಿ ಕಡೆ ವಾಸವಿರುವ ನಾವು ಇದರಿಂದ ಗ್ಯಾಸ್ ಸಿಲಿಂಡರ್ ಪಡೆಯಲು ಬಹುದೂರ ಹೋಗಬೇಕಾಗಿದೆ. ಒಂದೊಮ್ಮೆ ಅಲ್ಲಿಗೆ ಹೋದರೂ ಮತ್ತೊಂದು ದಿನ ಬನ್ನಿ ಎಂದು ಸಾಗ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಹೆಚ್ಚುವರಿ ಸಿಲಿಂಡರ್ ಪಡೆಯಲು ಅರ್ಜಿ ನೀಡಿದರೂ ಸಿಲಿಂಡರ್ ನೀಡದೇ ಸತಾಯಿಸುತ್ತಾರೆ. ಹೆಚ್ಚುವರಿ ಹಣ ಕಟ್ಟಿದರಷ್ಟೇ ಸಿಲಿಂಡರ್ ಪಡೆಯಬಹುದಾಗಿದೆ. ಹೆಸರು ಬದಲಾವಣೆಗೂ ಹೆಚ್ಚುವರಿ ಹಣ ತೆರಬೇಕಾಗಿದೆ. ಇಂತಹ ಅವ್ಯವಸ್ಥೆಗಳಿಂದ ಸಾರ್ವಜನಿಕರು ರೋಸಿ ಹೋಗಿದ್ದೇವೆ.
ಆದುದರಿಂದ ನಮಗೆ ಮನೆ ಬಳಕೆಯ ಸಮರ್ಪಕವಾದ ಗ್ಯಾಸ್ ಸಿಲಿಂಡರ್ ವಿತರಣೆಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

error: Content is protected !!