
ಬೆಳ್ತಂಗಡಿ:ಶಾಲೆಗೆ ತೆರಳುತಿದ್ದ ಒಂದೇ ಮನೆಯ ಇಬ್ವರು ವಿದ್ಯಾರ್ಥಿಗಳು ಬಸ್ ನಿಂದ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ನಡೆದಿದೆ.
ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದು, ರೇಷ್ಮೆ ಕ್ರಾಸ್ ರೋಡ್ ಎಂಬಲ್ಲಿ ಪೆಟ್ರೊಲ್ ಪಂಪ್ ಎದುರು ಒಮ್ಮೆಲೆ ಬಸ್ ನ ಬಾಗಿಲು ತೆರೆಯಲ್ಪಟ್ಟು ಒಬ್ಬಳು ಕೆಳಗೆ ಬೀಳುವ ವೇಳೆ ಅಕ್ಕನನ್ನು ಹಿಡಿದುಕೊಳ್ಳಲು ತಂಗಿ ಪ್ರಯತ್ನಿಸಿದ ಸಂದರ್ಭ ಇಬ್ಬರೂ ನಿಯಂತ್ರಣ ತಪ್ಪಿ ಕೆಳಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ತಕ್ಷಣ ಸ್ಥಳೀಯರ ಸಹಕಾರದಲ್ಲಿ ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮಾಹಿತಿ ಪ್ರಕಾರ ಓರ್ವ ವಿದ್ಯಾರ್ಥಿನಿ ಎಸ್ ಎಸ್ ಎಲ್.ಸಿ ಪರೀಕ್ಷೆಗೆ ತೆರಳುತಿದ್ದು ಮತ್ತೊಬ್ಬಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದು, ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿಗಳ ಮಕ್ಕಳಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಈಗಾಗಲೇ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿನಿ ಪ್ರಥಮ ಚಿಕಿತ್ಸೆ ಪಡೆದು ಸಹಾಯಕಿಯೊಂದಿಗೆ ಪರೀಕ್ಷೆ ಬರೆಯಲು ತೆರಳಿರುವ ಮಾಹಿತಿ ಲಭ್ಯವಾಗಿದೆ.