ಮಹಿಳೆಯರ ಮೇಲೆ ಇನ್ಸ್ ಪೆಕ್ಟರ್ ಲೈಂಗಿಕ ದೌರ್ಜನ್ಯ ಆರೋಪ :ಪ್ರಕರಣದ ತನಿಖೆ ಸಿಐಡಿಗೆ, ಗೃಹಸಚಿವರ ಸೂಚನೆ:

ಬೆಂಗಳೂರು: ಮಹಿಳೆಯರ ಮೇಲೆ ಮೂಡಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಬಿದಿರೆಯ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಂತ್ರಸ್ತೆಯನ್ನು ಭೇಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಡಿಜಿಪಿಗೆ ಸೂಚಿಸಿದ್ದೇನೆ ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ಆರೋಪ ಬಂದ ಬಳಿಕ ಅವರನ್ನು ಅಮಾನತು ಮಾಡುವ ಮೂಲಕ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ. ವರದಿ ನೀಡುವಂತೆ ಸೂಚಿಸಲಾಗಿದ್ದು, ಕೊಡುತ್ತಾರೆ. ಇನ್ನೂ ಅನೇಕ ವಿಚಾರಗಳನ್ನು ಕೇಳಿದ ಮೇಲೆ ಹೆಚ್ಚಿನ ತನಿಖೆ ಮಾಡಬೇಕೆಂದು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆಯ ಬಳಿಕ ಸತ್ಯಾಂಶ ಹೊರಬರುತ್ತದೆ. ಇನ್ನೂ ಎಷ್ಟು ಜನ ಸಂತ್ರಸ್ತರಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಲಿದೆ. ಇದಕ್ಕಾಗಿಯೇ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು