
ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ರಾಜ್ಯಸಭಾ ಅನುದಾನದಲ್ಲಿ ಧರ್ಮಸ್ಥಳದ ಅಶೋಕನಗರ ಅಭಿವೃದ್ಧಿಗೆ ₹2.41 ಕೋಟಿ ರೂ. ಮಂಜೂರಾಗಿದ್ದು ಕಾಶಮಗಾರಿಗೆ ಶಿಲಾನ್ಯಾಸ ಸಮರಂಭ ಭಾನುವಾರ ಅಮೃತವರ್ಷಿಣಿ ಸಭಾಭವನದ ಬಳಿ ಇರುವ ಮೈದಾನದಲ್ಲಿ ನಡೆಯಿತು.

ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಮಾಡಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ಕನಸು ಕಂಡ ಗ್ರಾಮರಾಜ್ಯದ ಮೂಲಕ ರಾಮರಾಜ್ಯದ ಕನಸು ದೇಶದೆಲ್ಲೆಡೆ ನನಸಾಗುತ್ತಿದೆ. ಅಶೋಕನಗರದಲ್ಲಿ ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ, ಸ್ವಚ್ಛತೆ ಮೊದಲಾದ ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಪೂಜ್ಯ ಹೆಗ್ಗಡೆಯವರು ೨.೪೧ ಕೋಟಿ ರೂ. ಅನುದಾನ ಮಂಜೂರು ಮಾಡಿದ ಬಗ್ಗೆ ಅವರು ವಿಶೇಷ ಕೃತಜ್ಞತೆ ಅರ್ಪಿಸಿದರು. ಎಲ್ಲೆಡೆ ಸಮಾಜದ ಸರ್ವತೋಮುಖ ಪ್ರಗತಿಯ ಕನಸು ನನಸಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಅನುದಾನ ಮಂಜೂರಾತಿ ಬಗ್ಗೆ ಸಹಕರಿಸಿದ ರಾಜ್ಯಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಕೆ.ಎನ್. ಜನಾರ್ದನ್ ಮತ್ತು ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಅವರ ಸಕ್ರಿಯ ಸಹಕಾರಕ್ಕಾಗಿ ಶಾಸಕರು ಅಭಿನಂದಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್ ಮತ್ತು ರಾಜ್ಯಸಭಾ ಸದಸ್ಯರ ಆಪ್ತ ಕಾರ್ಯದರ್ಶಿ ಕೆ.ಎನ್. ಜನಾರ್ದನ್ ಶುಭಾಶಂಸನೆ ಮಾಡಿದರು.
ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಮಾತನಾಡಿ ಅಶೋಕನಗರದ ಸರ್ವತೋಮುಖ ಪ್ರಗತಿಯ ಕನಸು ನನಸಾಗುವ ಸುವರ್ಣಾವಕಾಶ ಒದಗಿ ಬಂದಿದೆ. “ಹಿಂದುಳಿದವರು ಎಂಬ ಪದವನ್ನೇ ಅಳಿಸಿ ಎಲ್ಲರೂ ಮುಂದುವರಿದವರು ಆಗಬೇಕು ಎಂಬುದು ಪೂಜ್ಯ ಹೆಗ್ಗಡೆಯವರ ಆಶಯವಾಗಿದೆ. ಅಶೋಕನಗರವು “ಸಾಮ್ರಾಟ್ ಅಶೋಕನಗರ” ವಾಗಿ ಬೆಳೆಯಲಿ, ಬೆಳಗಲಿ ಎಂದು ಅವರು ಹಾರೈಸಿದರು.

ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿಮಲಾ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಧರ್ಮಸ್ಥಳ, ನಿರ್ಮಿತಿ ಕೇಂದ್ರದ ಎಂಜಿನಿಯರ್ ನವೀನ್, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯಪ್ರಸಾದ್, ಬೀಡಿನ ಪ್ರಬಂಧಕ ರಾಜೇಂದ್ರ ದಾಸ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಅಶೋಕನಗರದ ಗುರಿಕಾರ ಕರಿಯ ಗುರಿಕಾರ ಮತ್ತು ಒತ್ತು ಗುರಿಕಾರ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸ್ವಾಗತಿಸಿದರು. ಪಿ.ಡಿ.ಒ. ಗಾಯತ್ರಿ ಧನ್ಯವಾದವಿತ್ತರು. ದೇವಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.