
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಕಳಿಯ ಗ್ರಾಮ ಪಂಚಾಯತ್ ಮಟ್ಟದ 26ನೇ ಜನಸ್ಪಂದನ ಸಭೆ ಡಿ. 20 ರಂದು ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಏರುಕಡಪ್ಪು ಅಂಗನವಾಡಿ ಕೇಂದ್ರದ 150 ಮೀಟರ್ ಉದ್ದದ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ಬೇಡಿಕೆಯನ್ನು ಇಟ್ಟರು. ಅನುದಾನ ಕೊರತೆಯಿದ್ದಲ್ಲಿ ನಾಗರಿಕರಾದ ನಾವು ಶ್ರಮದಾನ ಮಾಡುವ ಮೂಲಕ ದುರಸ್ತಿಗೊಳಿಸುತ್ತೇವೆ. ಅದೇ ರಸ್ತೆಯ ಸಮೀಪದಲ್ಲಿರುವ ಎರಡು ಮನೆಗಳ ವ್ಯಕ್ತಿಗಳು ದುರಸ್ತಿಗೆ ಅಡ್ಡಿಪಡಿಸುತ್ತಿದ್ದಾರೆ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಾಸಕರಲ್ಲಿ ವಿನಂತಿಸಿದರು. ರಸ್ತೆಯನ್ನು ಪರಿಶೀಲನೆ ನಡೆಸುತ್ತೇನೆ. ಕಳೆದ ಅವಧಿಯಲ್ಲಿ ಕಳಿಯ ಗ್ರಾಮ ಪಂಚಾಯತ್ ಗೆ 21 ಕೋಟಿ ರೂಪಾಯಿ ಅನುದಾನ ಒದಗಿಸಿ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ ಆದರೆ ಇಂದು ಸರ್ಕಾರದಿಂದ ಅಭಿವೃದ್ಧಿಗೆ ಸಮರ್ಪಕವಾಗಿ ಅನುದಾನ ದೊರೆಯುತ್ತಿಲ್ಲ ಎಂದು ಶಾಸಕರು ಬೇಸರಿಸಿದರು. ಸದ್ರಿ ರಸ್ತೆಯ ಜಾಗದ ವಿಚಾರವಾಗಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸುವಂತೆ ಶಾಸಕರು ಸೂಚಿಸಿದರು.
ಅರಣ್ಯ ಇಲಾಖೆ 183 ಎಕ್ರೆ ಭೂಮಿಯನ್ನು ಅರಣ್ಯ ಇಲಾಖೆ 17ಅ್ಯಕ್ಟ್ ನಡಿಯಲ್ಲಿ ನೋಟಿಫಿಕೇಶನ್ ಮಾಡಲು ಮುಂದಾಗಿದೆ ಇದರಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾಗಲಿದೆ. ಅರಣ್ಯ ಇಲಾಖೆ ಜನರಿಗೆ ಯಾವುದೇ ನೋಟಿಸ್ ನೀಡದೆ ಸರ್ವೇ ನಡೆಸಿದೆ ಇದರ ಪರಿಣಾಮ ಕೆಲವು ಮನೆಗಳ ಅಂಗಳದವರೆಗೂ ಸರ್ವೇ ನಡೆಸಿರುವುದು ಖಂಡನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಅರಣ್ಯ ಇಲಾಖೆ – ಕಂದಾಯ ಇಲಾಖೆಯ ಭೂಮಿಯ ಗೊಂದಲದ ಕುರಿತು ಶೀಘ್ರವೇ ಐಬಿಯಲ್ಲಿ ತಹಶೀಲ್ದಾರ್ ಆರ್ ಎಫ್ ಓ , ಗ್ರಾಮ ಪಂಚಾಯತ್ , ನಾಗರೀಕರ ಜೊತೆ ವಿಶೇಷ ಸಭೆ ನಡೆಸಲಾಗುವುದು ಎಂದು ಹೇಳಿದರು.
ಅರಣ್ಯ ಇಲಾಖೆಯ ಜಾಗದ ವಿಚಾರದಲ್ಲಿ ನನ್ನ ಮೇಲೆ ಎರಡು ದೂರು ದಾಖಲಾಗಿದೆ. ರೆಖ್ಯಾದಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿದಾಗ ಹೆಚ್ಚುವರಿ ಭೂಮಿ ದೊರೆತಿದೆ. ಇದಕ್ಕೆ ಸರ್ಕಾರದಲ್ಲಿ ಅನುಮೋದನೆ ನೀಡಿದರೆ ರಾಜ್ಯದ ನಾನಾ ಭಾಗಗಳ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗುತ್ತದೆ ಎಂದು ಈ ವೇಳೆ ಶಾಸಕರು ಉಲ್ಲೇಖಿಸಿದರು.
ಗೋವಿಂದೂರು ಬಳಿ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಕಾಮಗಾರಿಗೆ ಅರಣ್ಯ ಇಲಾಖೆಯ ತಡೆ ಇದೆ ಇದನ್ನು ಶೀಘ್ರವೇ ಸರಿಪಡಿಸಬೇಕು ಎಂದು ಗ್ರಾಮಸ್ಥರು ಹೇಳಿದರು. ಈ ಕುರಿತು ಎಫ್ ಸಿಗೆ ಸಲ್ಲಿಸಿರುವುದಾಗಿ ಅರಣ್ಯಾಧಿಕಾರಿ ತಿಳಿಸಿದರು. 235 ಸರ್ವೇ ನಂಬರ್ 30 ಸೆಂಟ್ಸ್ ಜಾಗವನ್ನು ಗಡಿ ಗುರುತು ಮಾಡಿ ಆರೋಗ್ಯ ಇಲಾಖೆಗೆ ನೀಡಬೇಕು ಎಂದು ಗ್ರಾಮಸ್ಥರು ಹೇಳಿದರು.
ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡುವಂತೆ ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದರು.
ಜಾತ್ರೆ ನೇಮೋತ್ಸವದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಅನುಮತಿ ನೀಡುವ ಕುರಿತು ಸಚಿವರಿಗೆ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದರು.
ತಾಲೂಕು ಮಟ್ಟದ ಅಧಿಕಾರಿಗಳನ್ನು ಗ್ರಾಮ ಮಟ್ಟದ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸುವ ದೃಷ್ಟಿಯಿಂದ ಜನಸ್ಪಂದನ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿ ಈ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರಿಗೆ ಗ್ರಾಮಸ್ಥರ ವತಿಯಿಂದ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಮೆದಿನ, ಉಪಾಧ್ಯಕ್ಷೆ ಇಂದಿರಾ ಬಿ. ಶೆಟ್ಟಿ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಂಞ ಕೆ., ಸದಸ್ಯರು, ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.