ಬೆಳ್ತಂಗಡಿ ರೋಟರಿ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ: ಸೇವೆಯಿಂದ ತೃಪ್ತಿ ಪಡೆದವರು ನೀಡುವ ಆಶೀರ್ವಾದದ ಮೌಲ್ಯ ಅಗಣಿತ -ಡಿಜಿ ರಾಮ್ಕೀ

 

 

 

ಬೆಳ್ತಂಗಡಿ: ಅರ್ಹರನ್ನು ಗುರುತಿಸಿ ನೀಡುವ ಸೇವೆಯಿಂದ ತೃಪ್ತಿ ಪಡೆದವರು ಮನಃಪೂರ್ವಕವಾಗಿ ನೀಡುವ ಆಶೀರ್ವಾದದ ತೂಕ ಮತ್ತು ಮೌಲ್ಯ ಅಗಣಿತವಾದುದು.
ಬೆಳ್ತಂಗಡಿ ರೋಟರೀ ಸಂಸ್ಥೆ ಇದೀಗ ಸೇವಾ ವಲಯದಲ್ಲಿ ಇಡೀ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಆದರೆ ದೇಶದ ಬೇರೆ ಯಾವುದಾದರೂ ರೋಟರೀ ಕ್ಲಬ್ ಗಳಲ್ಲಿ ನಮಗಿಂತ ಒಳ್ಳೆಯ ಸೇವಾ ಕಾರ್ಯಕ್ರಮ ನಡೆಯುತ್ತಿದ್ದಲ್ಲಿ ಅವುಗಳನ್ನು ಅನುಸರಿಸಿ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ (ರಾಮ್ಕೀ) ಯವರು ನುಡಿದರು.
ಅವರು ರೋಟರೀ ಕ್ಲಬ್ ಬೆಳ್ತಂಗಡಿಗೆ ಅಧಿಕೃತ ಭೇಟಿ ನೀಡಿ, ಮೊದಲು ಕ್ಲಬ್ ಅಸೆಂಬ್ಲಿ ನಡೆಸಿ, ಕ್ಲಬ್ಬಿನ 1.4 ಕೋಟಿ ರೂಪಾಯಿ ಮೌಲ್ಯದ ಸಾಮಾಜಿಕ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ದಿವಸ ಸೇವಾ ಚಟುವಟಿಕೆ:
ಬೆಳ್ತಂಗಡಿ ಪ್ರವಾಸ ಕೈಗೊಂಡ ಅವರು ಬೆಳ್ತಂಗಡಿ ಸರಕಾರಿ ಹೈಸ್ಕೂಲಿನ 150 ಮಕ್ಕಳಿಗೆ, ರೋಟರಿ ಬೆಂಗಳೂರು ಇಂದಿರಾ ನಗರದವರು ಕೊಡಮಾಡಲ್ಪಟ್ಟ 60 ಸಾವಿರ ಮೌಲ್ಯದ ಟೀಶರ್ಟ್ ಮತ್ತು ಪ್ಯಾಂಟನ್ನು ರಾಮ್ಕೀಯವರು ವಿತರಿಸಿದರು.
ಕ್ಯಾನ್ ಫಿನ್ ಹೋಮ್ಸ್ (ಲಿ) ಇವರಿಂದ 18 ಲಕ್ಷ ಹಣ ಮಂಜೂರಾತಿ ಪಡೆದ ಕಳೆಂಜ ಗ್ರಾಮದಲ್ಲಿರುವ ನಂದಗೋಕುಲ ಗೋ ಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದರು.
ರೋಟರಿ ಕ್ಲಬ್ ಬೆಳ್ತಂಗಡಿಯವರು ಬೆಳಾಲು ಗ್ರಾಮದ ಪರಂಗಜೆಯಲ್ಲಿ ರೂ 35,000/- ವೆಚ್ಚದಲ್ಲಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣವನ್ನು ರಾಜ್ಯಪಾಲರ ಉಪಸ್ಥಿತಿಯಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಉದ್ಘಾಟಿಸಿದರು.

ಮಂಗಳೂರು ರೋಟರೀ ಕ್ಲಬ್ ನವರು ವೆನ್ ಲಾಕ್ ಆಸ್ಪತ್ರೆಯಲ್ಲಿ ಎದೆ ಹಾಲು ಸಂಗ್ರಹಣೆಯ ಬ್ಯಾಂಕ್ ನಿರ್ಮಾಣ ಮಾಡಿಕೊಟ್ಟ ಮಾಹಿತಿಯನ್ನು ನೀಡಿ,ಈ ಕೇಂದ್ರದಿಂದ ಸೇವೆ ಪಡೆದು ಅನೇಕ ನವಜಾತ ಶಿಶುಗಳು ಬದುಕುಳಿದ ಉದಾಹರಣೆಗಳನ್ನು ನೀಡಿದರು. ಈ ಮಾದರಿಯನ್ನು ಬೆಂಗಳೂರು ಮತ್ತು ಮೈಸೂರುಗಳಲ್ಲಿ ಸ್ಥಾಪಿಸುವುದಾಗಿ ಹೇಳಿದರು.

ಬೆಳ್ತಂಗಡಿ ರೋಟರಿಯಿಂದ 1.40 ಕೋಟಿ ಸೇವಾ ಯೋಜನೆ;
ಬೆಳ್ತಂಗಡಿ ರೋಟರೀ ಕ್ಲಬ್ ಅಧ್ಯಕ್ಷ ಪ್ರಕಾಶ ಪ್ರಭು ಸ್ವಾಗತಿಸಿದರು. ಅವರು ತಮ್ಮ ಪ್ರಸ್ತಾವನೆಯಲ್ಲಿ ಬೆಳ್ತಂಗಡಿಯ ಎಲ್ಲಾ ಸೇವಾ ಸಂಸ್ಥೆಗಳ ಪೈಕಿ ಬೆಳ್ತಂಗಡಿ ರೋಟರೀ ಕ್ಲಬ್ ಮುಂಚೂಣಿಯಲ್ಲಿದ್ದು, ಈವರೇಗೆ 1 ಕೋಟಿ ನಾಲ್ವತ್ತು ಲಕ್ಷಗಳಷ್ಚು ಮೌಲ್ಯದ ಸೇವಾ ಕಾರ್ಯಕ್ರಮಗಳು ನಡೆದಿರುವುದಾಗಿ ತಿಳಿಸಿದರು. ಬೆಳ್ತಂಗಡಿ ರೋಟರೀ ಸದಸ್ಯರಾಗುವುದು ಈಗ ನಿಜಕ್ಕೂ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದರು.

ರೋಟರೀ ಕ್ಲಬ್ ವತಿಯಿಂದ ಯುವ ಸಾಧಕ, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಮಂತ ಕುಮಾರ್ ಜೈನ್, ಇಂಟರ್ ನ್ಯಾಷನಲ್ ವುಮನ್ ಚೆಸ್ ಚಾಂಪಿಯನ್ ಇಶಾ ಶರ್ಮ, ವೈದ್ಯಕೀಯ ಕ್ಷೇತ್ರದ ಯುವ ಸಾಧಕಿ ಡಾ. ಅಂಕಿತಾ ಭಟ್ ಬೆನಕ ಉಜಿರೆ, ಮುಂಡಾಜೆಯ ಕೃಷಿಕ, ಅಡೂರು ಎಲೆಕ್ಟ್ರಿಕಲ್ಸ್ ಮಾಲಕ ಅಡೂರು ವೆಂಕಟ್ರಾಯ ಸೇರಿ ಒಟ್ಟು ನಾಲ್ಕು ಸಾಧಕರನ್ನು ಗೌರವಿಸಲಾಯಿತು.

ಪ್ಲಾಟಿನಂ, ಗೋಲ್ಡನ್ ಅವಾರ್ಡ್:
ಈ ಬಾರಿಯ ವಿನೂತನ ಯೋಜನೆಯಲ್ಲಿ ರೋಟರಿಗಾಗಿ ರೂ.75,000/- ಕ್ಕಿಂತ ಹೆಚ್ಚು ಸೇವಾ ಚಟುವಟಿಕೆ ನಡೆಸಿಕೊಟ್ಟ ಸದಸ್ಯರುಗಳಾದ ಡಾ.ಶಶಿಧರ್ ಡೋಂಗ್ರೆ, ಬಿ.ಕೆ ಧನಂಜಯ್ ರಾವ್ , ಅನಂತ್ ಭಟ್ ಮಚ್ಚಿಮಲೆ, ವಿದ್ಯಾ ಕುಮಾರ್ ಕಾಂಚೋಡು, ಡಾ.ಗೋಪಾಲ ಕೃಷ್ಣ, ಸುಮಂತ್ ಕುಮಾರ್ ಜೈನ್, ತ್ರಿವಿಕ್ರಮ ಹೆಬ್ಬಾರ್ , ರಾಜಗೋಪಾಲ್ ಭಟ್ ಯು, ಪೂರಣ್ ವರ್ಮ, ಸಂದೇಶ್ ರಾವ್,  ,ಶರತ್ ಕೃಷ್ಣ ಪೆಡ್ವೆಟ್ನಾಯ, ಶ್ರೀಧರ್ ಕೆ.ವಿ., ಶ್ರೀಕಾಂತ ಕಾಮತ್, ಡಾ.ರಾಘವೇಂದ್ರ ಪಿದಮಲೆ, ಜಯರಾಮ್ ಎಸ್, ಯಶವಂತ ಪಟವರ್ಧನ್, ಕಾರ್ಯದರ್ಶಿ ಡಾ.ದಯಾಕರ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಹೀಗೆ ಒಟ್ಟು 18 ಜನರನ್ನು “ಪ್ಲಾಟಿನಂ ಮೆಂಬರ್ 2025-26” ಎಂದು ನಾಮ ಫಲಕ ನೀಡಿ, ಗವರ್ನರ್ ಗೌರವಿಸಿದರು.
ಅದೇ ರೀತಿ ರೋಟರಿಗಾಗಿ ರೂ 50,000 ಕ್ಕಿಂತ ಹೆಚ್ಚು ಸೇವಾ ಚಟುವಟಿಕೆ ನಡೆಸಿಕೊಟ್ಟ ಸದಸ್ಯರುಗಳಾದ ವೆಂಕಟ್ರಾಯ ಅಡೂರ್ , ನಾರಾಯಣ್ ಪೈ, ಡಾ. ಎ.ಜಯಕುಮಾರ್ ಶೆಟ್ಟಿ, ರತ್ನವರ್ಮ ಜೈನ್, ಬಿ.ಸೋಮಶೇಖರ ಶೆಟ್ಟಿ, ಪ್ರದೀಪ ಕುಮಾರ್ ಶೆಟ್ಟಿ, ಕೆ.ಎಮ್.ರಾಧಾಕೃಷ್ಣ ಮಯ್ಯ, ಪ್ರತಿಮಾ ಬಿ.ವಿ, ಡಾ.ರೋಹನ್ ದೀಕ್ಷಿತ್,ಡಿ.ಎಂ ಗೌಡ ಹೀಗೆ  ಒಟ್ಟು 10 ಮಂದಿಯನ್ನು “ಗೋಲ್ಡನ್ ಮೆಂಬರ್ 2025-26” ಎಂದು ನಾಮ ಫಲಕ ನೀಡಿ ಗೌರವಿಸಲಾಯಿತು.

ಜತೆಗೆ ರೋಟರಿಗೆ ಸಂಬಂಧ ಪಟ್ಟ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸಿದ ರೋಟರ್ ಮ್ಯಾಗಜೀನ್ ಚೆಯರ್ ಮ್ಯಾನ್ ಕಿರಣ್ ಕುಮಾರ್ ಹೆಬ್ಬಾರ್, ಸ್ಕಾಲರ್ ಶಿಪ್ ಮತ್ತು ಪ್ರಾಜೆಕ್ಟ್ ಚೆಯರ್ ಮ್ಯಾನ್ ಅಬೂಬಕ್ಕರ್ ಯು ಎಚ್ ಹಾಗೂ ಝೋನಲ್ ಲೆವೆಲ್ ಸ್ಪೋರ್ಟ್ಸ್ ಚೆಯರ್ ಮ್ಯಾನ್ ಆದರ್ಶ ಕಾರಂತ ಇವರನ್ನು ಸ್ಟಾರ್ ಮೆಂಬರ್ 2025-26 ಎಂದು ನಾಮ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯದರ್ಶಿ ಡಾ ಎಂ ಎಂ ದಯಾಕರ್ ವರದಿ ವಾಚಿಸಿದರು. ಅಸಿಸ್ಟೆಂಟ್ ಗವರ್ನರ್ ಡಾ ಎ ಜಯಕುಮಾರ್ ಶೆಟ್ಟಿ ಮತ್ತು ವಲಯಾಧಿಕಾರಿ ಸುರೇಶ ಸಾಲ್ಯಾನ್ ಶುಭಾಶಂಸನೆ ಗೈದರು. ಮುಂದಿನ ವರ್ಷದ ಅಧ್ಯಕ್ಷ ಶ್ರೀಧರ ಕೆವಿ ವಂದನಾರ್ಪಣೆಗೈದರು. ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ ಕಾಮತ್ ಉಪಸ್ಥಿತರಿದ್ದರು.

error: Content is protected !!