
ಬೆಳ್ತಂಗಡಿ:ಸುಮಾರು 73 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯೆ ಸುಲಭದಲ್ಲಿ ದೊರಕಬೇಕು ಎಂಬ ದೂರದೃಷ್ಟಿಯಿಂದ ಗ್ರಾಮೀಣ ಪ್ರದೇಶದ ಬಳಂಜದ ಪಟೇಲರಾಗಿದ್ದ ಕಿನ್ನಿ ಯಾನೆ ಕೋಟಿ ಪಡಿವಾಳರು ಆಗ ಸಮಾಜದಲ್ಲಿ ಗುರುತಿಸಿ, ಗಣ್ಯರ ನೆರವಿನೊಂದಿಗೆ ಆರಂಭಿಸಿದ ಈ ಸಂಸ್ಥೆ ಸಾವಿರಾರು ಮಕ್ಕಳಿಗೆ ವಿದ್ಯೆಯನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ದಾರಿ ತೋರಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿಕೆ ಹೇಳಿದರು.
ಅವರು ಡಿ. 8ರಂದು ಬಳಂಜ ಶಾಲಾ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಮಹೋತ್ಸವ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು
ಈ ಶಾಲೆಯನ್ನು ಬೆಳೆಸುವಲ್ಲಿ ನೂರಾರು ಜನರ ಶ್ರಮ ಇದೆ. ಕೆ ವಸಂತ ಸಾಲಿಯಾನ್,ಎಚ್ ಧರ್ಣಪ್ಪ ಪೂಜಾರಿ,ಉದಯವರ್ಮ ಪಡಿವಾಳ್,ಚಂದ್ರರಾಜ ಪೂವಣಿ ಮುಂತಾದ ಹಿರಿಯರ ಶ್ರಮದಿಂದ ಮುನ್ನಡೆಸಲ್ಪಟ್ಟ ಈ ಶಾಲೆ ಹಳೆ ವಿದ್ಯಾರ್ಥಿಗಳ ಕೊಡುಗೆಯಿಂದ ಮತ್ತು ವಿದ್ಯಾಭಿಮಾನಿಗಳ ದೇಣಿಗೆಯಿಂದ ಹಾಗೂ ಇಲಾಖೆಯ ಅನುದಾನದಿಂದ ಯಶಸ್ವಿಯಾಗಿ ಮುನ್ನಡೆಸಲ್ಪಟ್ಟಿದೆ ಎಂದರು.
ಹೈಸ್ಕೂಲು ಕೂಡ ಮಂಜೂರಾತಿಗೊಂಡು ಇದೇ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದ್ದು ಸುಮಾರು 50 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಬಳಂಬ ಶಿಕ್ಷಣ ಟ್ರಸ್ಟ್ ಅವರು ನಮಗೆ ಸಹಕರಿಸುತ್ತಿದ್ದಾರೆ. ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರುಗಳ ನಿಷ್ಠೆ ಮತ್ತು ಬದ್ದತೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣವು ಈ ಪ್ರದೇಶದ ಮಕ್ಕಳಿಗೆ ದೊರಕಿದೆ ಎಂದರು.
ಬೆಳ್ಳಿಹಬ್ಬ ಮತ್ತು ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿ, ಇದೀಗ 75 ವರ್ಷದ ಅಮೃತ ಸಂಭ್ರಮದಲ್ಲಿ ಇದ್ದೇವೆ ಆಮಂತ್ರಣ ಪತ್ರಿಕೆಯಲ್ಲಿ ಇದ್ದಂತೆ ಸರಕಾರದ ಮಂತ್ರಿ ಮಹೋದಯರು, ಶಾಸಕರು, ಶಿಕ್ಷಣ ಕ್ಷೇತ್ರದ ಗಣ್ಯರು ಹಾಗೂ ದಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಡಿಸೆಂಬರ್ ತಿಂಗಳ 13 ಮತ್ತು 14 ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಲಿದೆ. ಡಿ 13 ರಂದು ಶನಿವಾರ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ನಂತರ ಸಂಜೆ ಜಿಲೆಯ ಹೆಸರಾಂತ ಕಲಾವಿದ ಲಯನ್ ದೇವದಾಸ್ ಕಾಪಿಕಾಡ್ ನೇತೃತ್ವ ತಂಡದಿಂದ ಕಲಾ ರಸಿಕರ ಬಹು ಬೇಡಿಕೆಯ ನಾಟಕ ಪುದರ್ ದೀತಿಜಿ ಪ್ರದರ್ಶನ ಗೊಳ್ಳಲಿದೆ. ಡಿ.14 ರಂದು ಬೆಳಿಗ್ಗೆ ಗುರುವಂದನೆ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗೌರವಿಸಲಾಗುವುದು. ಚಂದನ ಚಾನಲ್ ನ ತಟ್ಟಂತ ಹೇಳಿ ಕಾರ್ಯಕ್ರಮದ ಖ್ಯಾತ ವಾಗ್ರಿಗಳು ಡಾಕ್ಟರ್ ನಾ ಸೋಮೇಶ್ವರ ಅವರು ಶಿಕ್ಷಕರ ಪಾಲ್ಗೊಳ್ಳುವಿಕೆಯ ಥಟ್ಟಂತ ಹೇಳಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಳೆ ವಿದ್ಯಾರ್ಥಿಗಳ ಮತ್ತು ಸಂಘ ಸಂಸ್ಥೆಗಳ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾಂತಾರ ಮತ್ತು ಸು ಪ್ರಂ ಸೋ ಖ್ಯಾತಿಯ ದೀಪಕ್ ರೈ ಪಾಣಿಜಿ ಅವರ ತಲಿಕೆದ ಪರ್ಬ ನಡೆಯಲಿದೆ ಎಂದರು.
ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಸಾಂಸ್ಕೃತಿಕ ವೈಭವ ಮತ್ತು ಸರಿಗಮ ಸಂಗೀತ ಸುದ್ದಿ ಕಾರ್ಯಕ್ರಮ ನಡೆಯಲಿದೆ. ಸುಮಾರು 5000 ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ,ಶಾಲಾ ಮುಖ್ಯೋಪಾಧ್ಯಾಯ ರಾದ ರಂಗಸ್ವಾಮಿ,ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸುಲೋಚನಾ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ,ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಳದ ಅಧ್ಯಕ್ಷ ಸುಕೇಶ್ ಉಪಸ್ಥಿತರಿದ್ದರು.