ಧರ್ಮಸ್ಥಳ ಪ್ರಕರಣ, ಎಸ್ಐಟಿ ಸಲ್ಲಿಸಿದ ವರದಿಯ ಪ್ರತಿ ನೀಡಲು ಅರ್ಜಿ ಸಲ್ಲಿಸಿದ ಜಯಂತ ಟಿ.: ವರದಿಯ ಕೆಲವೊಂದು ಪ್ರತಿ ನೀಡಲು ಕೋರ್ಟ್ ಒಪ್ಪಿಗೆ

 

 

 

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ (Perjury Report) u/s 215 ವರದಿಯನ್ನು ಕೇಳಿ ಸೌಜನ್ಯ ಪರ ಹೋರಾಟಗಾರ ಜಯಂತ್ ಟಿ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು 3,923 ಪುಟಗಳ ದಾಖಲೆಗಳಲ್ಲಿ ಕೆಲವೊಂದು ವರದಿಯ ಪ್ರತಿಗಳನ್ನು ನೀಡಲು ಸಮ್ಮತಿಸಿರುವುದಾಗಿ ಜಯಂತ್ ಟಿ ಪರವಾಗಿ ವಾದ ಮಂಡಿಸಿದ್ದ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆರಾಜು ಮಾಹಿತಿ ನೀಡಿದ್ದಾರೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ಜಯಂತ್ ಟಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಇತರರಿಗೆ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿತ್ತು ಹಾಜರಾಗದಿದ್ದರೆ‌ ಬಂಧಿಸುವುದಾಗಿ ನೋಟೀಸ್ ನೀಡಿದ್ದರು. ಇದಾದ ಬಳಿಕ ಎಸ್.ಐ.ಟಿ ನ್ಯಾಯಾಲಯದ ಮುಂದೆ ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು.

ತಮಗೆ ಆರೋಪಿ ಎಂದು ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ತಮಗೆ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಎಸ್.ಐ.ಟಿ ವರದಿಯನ್ನು ಬಹಿರಂಗ ಪಡಿಸದಂತೆ ಕೇಳಿಕೊಂಡಿರುವ ಕಾರಣದಿಂದ ಈ ವರದಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.

ಈ ಹಿನ್ನಲೆಯಲ್ಲಿ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆರಾಜು ಪ್ರಕರಣದ ಬಗ್ಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಜಯಂತ್ ಟಿ ಪರವಾಗಿ ವಕಾಲತು ಸಲ್ಲಿಸಿದ್ದು ಎಸ್.ಐ‌.ಟಿ ಸಲ್ಲಿಸಿದ್ದ ವರದಿಯನ್ನು ನೀಡುವಂತೆ ವಿನಂತಿಸಿತ್ತು.

ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದ ಜಯಂತ್ ಪರ ನ್ಯಾಯವಾದಿಗಳು ಎಸ್.ಐ.ಟಿ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ, ಚಿನ್ನಯ್ಯ ಹಾಗೂ ಜಯಂತ್ ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ತಂದಿರುವುದು ಯಾವುದೋ ದುರುದ್ದೇಶದಿಂದ ಅಲ್ಲ ಸದುದ್ದೇಶದಿಂದಲೇ ಇಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಗಮನಸೆಳೆಯಲು ಬಂಗ್ಲೆ ಗುಡ್ಡದ ಕಾಡಿನಿಂದ ಈ ತಕೆ ಬುರುಡೆಯನ್ನು ತಂದಿದ್ದಾರೆ. ಅದಕ್ಕಾಗಿ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಜಯಂತ್ ಅವರಿಗೆ 9 ನೋಟೀಸ್ ಗಳನ್ನು ನೀಡಲಾಗಿದ್ದು ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಹೇಳಿದ್ದಾರೆ. ಹೀಗಿರುವಾಗ ಅವರ ವಿರುದ್ದ ಸಲ್ಲಿಕೆಯಾಗಿರುವ ವರದಿಯನ್ನು ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ, ಇದು ಯಾವುದೇ ರೀತಿಯಲ್ಲಿ ದೇಶದ ಭದ್ರತೆಯ ವಿಚಾರ ಅಥವಾ ಇನ್ಯಾವುದೇ ಗುಪ್ತ ವಿಚಾರವಾಗಿರುವುದಿಲ್ಲ. ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿರುವುದಲ್ಲದೆ ಸುಪ್ರೀಂಕೋರ್ಟ್ ಹಾಗೂ ವಿವಿಧ ಹೈಕೋರ್ಟ್ ಗಳು ಈ ಬಗ್ಗೆ ನೀಡಿರುವ ತೀರ್ಪು ಗಳನ್ನು ನ್ಯಾಯಾಲಯದ ಗಮನಕ್ಕೆ ತಂದು ತಮ್ಮ ಕಕ್ಣಿದಾರರಿಗೆ ಕಾನೂನಿನ ರಕ್ಷಣೆ ಪಡೆಯಲು ಈ ದಾಖಲೆಗಳು ಅಗತ್ಯವಾಗಿದೆ ಎಂಬ ವಾದವನ್ನು ಮಂಡಿಸಿದ್ದು ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಎಸ್.ಐ.ಟಿ ಅಪರಾಧ ಸಂಖ್ಯೆ 39/2025ಕ್ಕೆ ಸಂಬಂಧಿಸಿದಂತೆ (Perjury Report) u/s 215 ಅಡಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿನ 183 ಹೇಳಿಕೆ ಹಾಗೂ ಕೆಲವೊಂದು ಗೌಪ್ಯ ಮಾಹಿತಿಗಳನ್ನು ಬಿಟ್ಟು ಉಳಿದ ವರದಿಗಳ ಪ್ರತಿಗಳನ್ನು ಮಾತ್ರ ಕಕ್ಷಿದಾರರಿಗೆ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.

error: Content is protected !!