ದಲಿತ ಸಮುದಾಯದ ದುರುಪಯೋಗ, ಮುಖಂಡರ ಆಕ್ರೋಶ:ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಪ.ಜಾತಿ/ಪಂಗಡಗಳ ಕುಂದುಕೊರತೆ ಸಭೆ:

 

 

 

ಬೆಳ್ತಂಗಡಿ:ಜಮೀನು , ರಸ್ತೆ ವಿವಾದಗಳಲ್ಲಿ ಮೇಲ್ಜಾತಿಯವರು ಹಣಕಾಸಿನ ಆಮಿಷವೊಡ್ಡಿ ದಲಿತ ಸಮುದಾಯವನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು , ಸತ್ಯಕ್ಕೆ ದೂರವಾದ ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ ದಲಿತ ಮುಖಂಡರು ದಲಿತ ಸಮುದಾಯದ ದುರುಪಯೋಗ ನಿಜವಾದ ದಲಿತ ದೌರ್ಜನ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಡಿ01 ಸೋಮವಾರ  ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ‌.ಕೆ  ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ಈ ಘಟನೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ದಸಂಸ(ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂ.ಸಂಚಾಲಕ ಬಿ.ಕೆ ವಸಂತ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಬೆಂಬಲ ಸೂಚಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ , ನಿಜವಾಗಿ ದೌರ್ಜನ್ಯ , ಹಿಂಸೆ ಅನುಭವಿಸುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ದಲಿತ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದಿದೆ , ಅದರ ದುರುಪಯೋಗ ಸರಿಯಲ್ಲ ಎಂದ ಅವರು ಜಮೀನು, ರಸ್ತೆ ವಿವಾದಗಳಲ್ಲಿ ಪೋಲಿಸರು ಅನಗತ್ಯವಾಗಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದರು. ಹಿರಿಯ ದಲಿತ ಮುಖಂಡ ವೆಂಕಣ್ಣ ಕೊಯ್ಯುರು ಮಾತನಾಡಿ ಕೊಯ್ಯುರು ಗ್ರಾಮದಲ್ಲಿ ಸರಕಾರಿ ಜಮೀನು ಒತ್ತುವರಿ ವಿವಾದದಲ್ಲಿ ದಲಿತ ಯುವಕರನ್ನು ದುರುಪಯೋಗ ಮಾಡಿಕೊಂಡು ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದರು. ಈ ಬಗ್ಗೆ ಮಾತನಾಡಿದ ಡಿವೈಎಸ್ಪಿ ರವರು ಯಾರೇ ದೂರು ಕೊಟ್ಟರು ಅದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿ , ವಿಚಾರಣೆಯ ಹಂತದಲ್ಲಿ ಸುಳ್ಳು ಎಂದು ಸಾಬೀತು ಆದಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗುತ್ತದೆ ಎಂದರು.

ಸತೀಶ್ ಪಾರೆಂಕಿ ಮಾತನಾಡಿ ಕೆಲಸದ ಸ್ಥಳಗಳಲ್ಲಿ ಜಾತಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತದೆ. ಅದರ ವಿರುದ್ಧ ಮಾತನಾಡಿದರೆ ನಮ್ಮ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು ಎದುರಿಸಬೇಕಾಗುತ್ತದೆ ಎಂದರು. 15 ವರ್ಷಗಳ ಹಿಂದೆ ಹಿರಿಯ ದಲಿತ ನಾಯಕ ಶಿವಪ್ಪ ಬಂಗೇರರ ಕೊಲೆ ನಡೆದಿದ್ದು , ಇಲ್ಲಿಯ ತನಕ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೋಲಿಸ್ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಹಳೆಯ ಪ್ರಕರಣವಾಗಿರುವ ಕಾರಣ ಕಡತಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು. ಇನ್ನೊರ್ವ ದಲಿತ ಮುಖಂಡ , ಗುತ್ತಿಗೆದಾರ ಪ್ರಭಾಕರ್ ಕನ್ಯಾಡಿ ಮಾತನಾಡಿ ಗ್ರಾಮ ಪಂಚಾಯತ್ ಗಳಲ್ಲಿ ಕಾಮಗಾರಿಗಳನ್ನು ದಲಿತ ಗುತ್ತಿಗೆದಾರರ ಬದಲಾಗಿ ಇತರ ಗುತ್ತಿಗೆದಾರರಿಗೆ ನೀಡಿ ದಲಿತರಿಗೆ ಮೋಸ ಮಾಡಲಾಗುತ್ತದೆ ಎಂದು ದೂರಿದ ಅವರು ಧರ್ಮಸ್ಥಳ ಅಶೋಕನಗರ ದಲಿತ ಕಾಲನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ದೀರಜ್ ರವರು ತಿಳಿಸಿದರು. ಶೇಖರ್ ಕುಕ್ಕೇಡಿ ಮಾತನಾಡಿ ಸಭೆಗೆ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು. ದಲಿತ ಸಮುದಾಯದ ಅತಿ ಹೆಚ್ಚು ಸಮಸ್ಯೆಗಳು ಈ ಇಲಾಖೆಗಳಿಗೆ ಸಂಬಂಧಿಸಿದ್ದು , ಅವರ ಗೈರು ಹಾಜರಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡ ಸುಕುಮಾರ್ ದಿಡುಪೆ ಮಾತನಾಡಿ ಮಲವಂತಿಗೆ ಗ್ರಾಮದ ಮಲೆಕುಡಿಯ ಸಮುದಾಯ ಭವನವು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿ 6 ವರ್ಷಗಳಾದರೂ ಇನ್ನೂ ನಿರ್ಮಾಣವಾಗಿಲ್ಲ ಎಂದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮಾತನಾಡಿ ಕೆಲಸದ ಸ್ಥಳ ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಮಹಿಳೆಯರು ಅದರಲ್ಲೂ ದಲಿತ ಮಹಿಳೆಯರು ವಿವಿಧ ರೀತಿಯಲ್ಲಿ ದೌರ್ಜನ್ಯ , ಹಿಂಸೆಗೆ ಒಳಗಾಗುತ್ತಾರೆ ಇದನ್ನು ತಡೆಯಲು ಪೋಲಿಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಎಲ್ ಮಾತನಾಡಿ ರಾಜ್ಯ ಸರ್ಕಾರ ಮಂಜೂರುಗೊಳಿಸಿದ ಮಹತ್ವಾಕಾಂಕ್ಷೆಯ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು ರದ್ದುಗೊಳಿಸಲು ಷಡ್ಯಂತ್ರ ನಡೆಸುತ್ತಿರುವುದನ್ನು ವಿರೋಧಿಸಿ , ಯಾವುದೇ ಕಾರಣಕ್ಕೂ , ಯಾವುದೇ ಒತ್ತಡಕ್ಕೆ ಮಣಿಯದೆ ಪೋಲಿಸ್ ಉಪ ವಿಭಾಗವನ್ನು ರದ್ದು ಪಡಿಸದಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು. ಶಾಸಕರು ಈ ಹಿಂದೆ ಮಂಜೂರುಗೊಂಡಿದ್ದ ಪೋಲಿಸ್ ಉಪ ವಿಭಾಗವನ್ನು ರದ್ದುಗೊಳಿಸಿದ್ದು , ಇದೀಗ ಮತ್ತದೇ ಷಡ್ಯಂತ್ರವನ್ನು ನಡೆಸುತ್ತಿದ್ದಾರೆ ಎಂದರು. ಪರಿಶಿಷ್ಟ ಜಾತಿ/ ಪಂಗಡಗಳ ವಸತಿ ನಿಲಯ , ವಸತಿ ಶಾಲೆಗಳಲ್ಲಿ ರಾತ್ರಿ ವೇಳೆಯಲ್ಲಿ ವಾರ್ಡನ್ ಗಳು ಇರುವುದಿಲ್ಲ. ಹಾಸ್ಟೆಲ್ ಗಳಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿದ್ದು , ಮಕ್ಕಳ ರಕ್ಷಣಾ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದರು. ಬೆಳ್ತಂಗಡಿ ತಾಲೂಕಿನ ಐದಾರು ಗ್ರಾಮಗಳ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳು ವಂಚಿತಗೊಂಡಿದೆ. ಕಳೆದ ಮಳೆಗಾಲದಲ್ಲಿ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ನದಿಯಲ್ಲಿ ಯುವಕರಿಬ್ಬರೂ ಕೊಚ್ಚಿಕೊಂಡು ಹೋಗಿ ಬದುಕುಳಿದಿದ್ದು , ಅಲ್ಲಿ ಇಲ್ಲಿಯ ತನಕ ಸೇತುವೆ ನಿರ್ಮಾಣವಾಗಿಲ್ಲ , ಕುತ್ಲೂರು ಗ್ರಾಮದಲ್ಲಿಯೂ ಸೇತುವೆ ಮುರಿದು ನಾಲ್ಕೈದು ವರ್ಷಗಳಾದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ ಎಂದರು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಡಿವೈಎಸ್ಪಿ ರೋಹಿಣಿ ಸಿ.ಕೆ ತಿಳಿಸಿದರು.
ಬೆಳ್ತಂಗಡಿ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಪ್ರಾಸ್ತಾವಿಕವಾಗಿ ಮಾತನಾಡಿ , ಸಭೆಯಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಬೆಳ್ತಂಗಡಿ , ವೇಣೂರು, ಧರ್ಮಸ್ಥಳ ಪೋಲಿಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಳು ಉಪಸ್ಥಿತರಿದ್ದರು. ಹೆಡ್ ಕಾನ್ಸ್‌ಟೇಬಲ್ ಅಭಿಜಿತ್ ಸ್ವಾಗತಿಸಿ, ಧನ್ಯವಾದವಿತ್ತರು.

error: Content is protected !!