
ಬೆಂಗಳೂರು: ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಕೊಂಡೊಯ್ಯುತ್ತಿದ್ದ ವಾಹನದಿಂದ ಸುಮಾರು 7.11 ಕೋಟಿ ರೂಪಾಯಿ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸರ್ಕಾರಿ ವಾಹನದಂತೆ ಇನ್ನೋವಾ ಕಾರಿನಲ್ಲಿ ಸ್ಟಿಕ್ಕರ್ ಹಾಕಿ ಬಂದಿದ್ದ 5ರಿಂದ 6 ಜನರಿದ್ದ ತಂಡ ಸೌತ್ ಎಂಡ್ ಸರ್ಕಲ್ ಬಳಿ ಎಟಿಂಎಗೆ ಹಣ ತುಂಬಿಸಲು ಹೊರಟಿದ್ದ ವಾಹನವನ್ನು ತಡೆದಿದ್ದಾರೆ.
ಬಳಿಕ ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಆರ್‌ಬಿಐಯವರು ಎನ್ನುತ್ತಾ ವಾಹನದಲ್ಲಿದ್ದ ಗನ್‌ಮ್ಯಾನ್ ಸಹಿತ ಎಲ್ಲಾ ಸಿಬ್ಬಂದಿಗಳನ್ನು ಕೆಳಗಿಳಿಸಿದ್ದಾರೆ.
ಚಾಲಕನನ್ನು ಮಾತ್ರ ಕೂರಿಸಿಕೊಂಡು ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ವಾಹನವನ್ನು ಕರೆದೊಯ್ದಿದ್ದಾರೆ.
ಫ್ಲೈ ಓವರ್ ಮೇಲೆ ವಾಹನವನ್ನು ನಿಲ್ಲಿಸಿ ಚಾಲಕನನ್ನು ಬೆದರಿಸಿ, 7.11 ಕೋಟಿ ರೂ ಹಣವಿದ್ದ ಪೆಟ್ಟಿಗೆಯನ್ನು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದಾರೆ.
ದರೋಡೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು, ಸೋಕೋ ಟೀಂ ಅಧಿಕಾರಿಗಳು ಆಗಮಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಭೇಟಿ ನೀಡಿದ್ದು ಮಾಹಿತಿ ಪಡೆದಿದ್ದಾರೆ. ಬೆಂಗಳೂರಿನ ಎಲ್ಲ ವಿಭಾಗಗಳ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಆರೋಪಿಗಳ ಪತ್ತೆ ಕಾರ್ಯ ತೀವ್ರಗೊಂಡಿದೆ.