ಬೆಳ್ತಂಗಡಿ: ಮಾನವ ತನ್ನ ಬುದ್ಧಿ ಮತ್ತು ಸಾಮರ್ಥ್ಯದಿಂದ ಇತರ ಜೀವ ರಾಶಿಗಳಿಗಿಂತ ವಿಭಿನ್ನ ಮತ್ತು ಹೊಸತನದಿಂದ ಬದುಕುತಿದ್ದಾನೆ.ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು ಅವರು ಸೆ 28 ರಂದು ಗುರುವಾಯನಕೆರೆ ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಗುರು ನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ
ಪ್ರಕೃತಿಯಲ್ಲಿದ್ದ ವಿವಿಧ ಪ್ರಾಣಿ ಪಕ್ಷಿಗಳು ಗಿಡಮರಗಳು ತಮ್ಮ ಮೂಲ ಸ್ವಭಾವವನ್ನು ಅನುಸರಿಸಿ ಬದುಕುತ್ತವೆ. ಆದರೆ ಮನುಷ್ಯ ಮಾತ್ರ ಸದಾ ಹೊಸತನವನ್ನು ಹುಡುಕುತ್ತಿರುತ್ತಾನೆ.
ಮನುಷ್ಯನ ಆಂತರಾಳದಲ್ಲಿ ಸುಪ್ತವಾಗಿ ಅಡಗಿರುವ ಕ್ರೌರ್ಯ ವಿನಾಶಕಾರಿ ಪ್ರವೃತ್ತಿಗಳನ್ನು ನಾಶಪಡಿಸಿ ಆತ್ಮಶುದ್ಧಿಯನ್ನು ಸ್ಥಾಪಿಸುವುದು ಶಿಕ್ಷಣದ ಗುರಿಯಾಗಬೇಕು. ಬುದ್ಧಿಗಿಂತ ವಿದ್ಯೆಯೇ ಶ್ರೇಷ್ಠ. ಶ್ರೇಷ್ಠ ವಿದ್ಯೆಯನ್ನು ಕೊಡುವ ಮೂಲಕ ಎಕ್ಸೆಲ್ ಪಿಯು ಕಾಲೇಜ್ ಅಲ್ಪಕಾಲದಲ್ಲಿಯೇ ತನ್ನ ಜನಪ್ರಿಯತೆಯನ್ನು ನಾಡಿನಾದ್ಯಂತ ಪ್ರಸರಿಸಿದೆ” ಎಂದು ಎಕ್ಸೆಲ್ ಕಾಲೇಜಿನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೀಪ ಪ್ರಜ್ವಲನೆ ನೆರವೇರಿಸಿದ ವೇದಿಕೆಯ ಮೇಲಿದ್ದ ಗಣ್ಯರು ಕಾಲೇಜಿನ ವಾರ್ಷಿಕ ಡೈರಿ ಮತ್ತು ಕ್ಯಾಲೆಂಡರ ಗಳನ್ನೂ ಅನಾವರಣಗೊಳಿಸಿದರು.
ಎಕ್ಸೆಲ್ ಪಿಯು ಕಾಲೇಜಿನಲ್ಲಿ ಗುರು ನಮನ ಕಾರ್ಯಕ್ರಮದ ಪ್ರಯುಕ್ತ ರಾಜ್ಯದ 305 ಪೋಷಕ ಶಿಕ್ಷಕರಿಗೆ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು,ಉಪನ್ಯಾಸಕರು, ಪ್ರಾಂಶುಪಾಲರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಭಾಗವಹಿಸಿ ಅಭಿನಂದನೆಯನ್ನು ಸ್ವೀಕರಿಸಿದರು. ಪ್ರತಿಯೊಬ್ಬ ಶಿಕ್ಷಕರಿಗೂ ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಗೌರವಿಸಿದರು.
ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತಿರುವ ಸು ಫ್ರಮ್ ಸೋ ಚಿತ್ರತಂಡದ ನಿರ್ದೇಶಕ ಹಾಗೂ ನಟರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಟ ದೀಪಕ್ ರೈ ಪಾಣಾಜೆ ಮಾತನಾಡಿ ” ಇಷ್ಟೊಂದು ಗುರುಗಳಿರುವ ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇ ನನ್ನ ಪಾಲಿನ ಅದೃಷ್ಟ” ಎಂದು ಹೇಳುತ್ತಾ ಆನಂದ ಭಾಷ್ಪ ಹರಿಸಿದರು. ಚಿತ್ರದ ನಾಯಕ ನಟ ಮತ್ತು ನಿರ್ದೇಶಕರಾದ ಜೆ.ಪಿ ತುಮಿನಾಡು ಮಾತನಾಡುತ್ತಾ ” ನಮ್ಮ ಜೀವನದ ನಿರ್ಮಾತೃಗಳು ನಾವೇ. ನಮ್ಮ ಚಿಂತನೆಗಳೇ ನಮ್ಮ ಸಾಧನೆಗೆ ದಾರಿ ದೀಪವಾಗಬೇಕಿದೆ. ನಮಗೆ ಅಸಾಧ್ಯ ಎಂದು ಕೈಕಟ್ಟಿ ಕೂರಬಾರದು. ಪ್ರಯತ್ನವೇ ಯಶಸ್ಸಿನ ಮೂಲ ಮತ್ತು ಆತ್ಮಶಕ್ತಿ ಆಗಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎಕ್ಸೆಲ್ ಕಾಲೇಜಿನ ವತಿಯಿಂದ ಗುರು ನಮನ ಸ್ವೀಕರಿಸಿದ ಅನೇಕ ಪೋಷಕರು ನಮ್ಮ ಮಕ್ಕಳು ಈ ಕಾಲೇಜಿನಲ್ಲಿ ಓದುತ್ತಿರುವುದೇ ನಮ್ಮ ಪಾಲಿನ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಲ್ಲದೆ ಕಥೆ ಕವನಗಳನ್ನು ಬರೆಯುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ರಾಂತ ಪ್ರಾಚಾರ್ಯ ಬಿವಿ ಸೂರ್ಯನಾರಾಯಣ್ ರವರು ಮಾತನಾಡಿ ಶಿಕ್ಷಕರನ್ನು ಗೌರವಿಸುವ ಸಮಾಜವೇ ಸ್ವಾಸ್ಥ್ಯ ಸಮಾಜ. ಶಿಕ್ಷಕ ವೃತ್ತಿಯು ಎಲ್ಲಾ ವೃತ್ತಿಗಳ ತಾಯಿ ಇದ್ದಂತೆ. ವಿದ್ಯಾರ್ಥಿಗಳು ತಪಸ್ಸನ್ನ ಆಚರಿಸುವಂತೆ ವಿದ್ಯೆಯನ್ನು ಸಂಪಾದಿಸಿ ಶ್ರೇಷ್ಠ ಬದುಕನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ ” ಇಂದು ಆಸ್ತಿಗಿಂತ ವಿದ್ಯೆಗೆ ಶ್ರೇಷ್ಠ ಸ್ಥಾನ, ವಿದ್ಯೆ ಹಾಗೂ ಸದ್ಗುಣ ಇರುವ ಉತ್ತಮ ವ್ಯಕ್ತಿತ್ವ ಉಳ್ಳವನು ತಂದೆ ತಾಯಿಗಳಿಗೆ, ದೇಶಕ್ಕೆ ಆಸ್ತಿಯಾಗಬಲ್ಲನು, ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉಪನ್ಯಾಸಕರಾದ ಪ್ರಸನ್ನಭೋಜ ,ಈಶ್ವರ್ ಶರ್ಮ, ಪ್ರಜ್ವೀತ್ ರೈ ಇವರು ನಿರೂಪಣೆ ಮಾಡಿದರು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯರಾದ ಡಾ. ಪ್ರಜ್ವಲ್ ರವರು ವಂದಿಸಿದರು.