ಬೆಳ್ತಂಗಡಿ: ದೈನಂದಿನ ಚಟುವಟಿಕೆಗಳ ಒತ್ತಡದಲ್ಲಿ ಜೀವನ ಸಾಗಿಸುತ್ತಿರುವ ಜನ ಸಾಮಾನ್ಯರ ಆರೋಗ್ಯದ ಕಾಳಜಿಯ ಬಗ್ಗೆ ಗಮನ ಹರಿಸಿ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿರುವ ರಾಜಕೇಸರಿ ಸೇವಾ ಟ್ರಸ್ಟ್ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ ಹೇಳಿದರು. ಅವರು ಸರಕಾರಿ ಕಿರಿಯ .ಪ್ರಾಥಮಿಕ ಶಾಲೆ ನಾವೂರು ವಠಾರದಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಸಂಸ್ಥಾಪಕ ದೀಪಕ್ ಜಿ ನೇತೃತ್ವದಲ್ಲಿ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ , ಪ್ರಸಾದ್ ನೇತ್ರಾಲಯ ಉಡುಪಿ ಮತ್ತು ಶ್ರೀ ದೇವಿ ಆಪ್ಟಿಕಲ್ಸ್ ಸಂತೆಕಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ಉಚಿತ ನೇತ್ರಾ ಮತ್ತು ಹೃದಯ ತಪಾಸಣಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಿನ ಕಾಲಘಟ್ಟದಲ್ಲಿ ಆರೋಗ್ಯವನ್ನು ಕಾಪಾಡುವುದೇ ಪ್ರತಿಯೊಬ್ಬರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ದಿನಂಪ್ರತಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಅದರಲ್ಲೂ ಮಕ್ಕಳೂ ಸೇರಿದಂತೆ ಹದಿ ಹರೆಯದ ಯುವಕ ಯುವತಿಯರು ಹೆಚ್ಚಾಗಿ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಇದಕ್ಕೆ ಕಾರಣ ಒತ್ತಡದ ಜೀವನ ಪದ್ಧತಿ, ಅದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಆರೋಗ್ಯವಂತರಾಗಿ ಬದುಕಬೇಕು. ಈ ನಿಟ್ಟಿನಲ್ಲಿ ಇವತ್ತಿನ ಆರೋಗ್ಯ ಶಿಬಿರ ಬಹಳ ಮಹತ್ವವನ್ನು ಪಡೆಯುತ್ತದೆ. ಎಂದ ಅವರು ಕಳೆದ 13 ವರ್ಷಗಳಿಂದ ಅಶಕ್ತ ಕುಟುಂಬಗಳಿಗೆ ಆರ್ಥಿಕ ಸಹಾಯ, ಮನೆ ಇಲ್ಲದ ಬಡವರಿಗೆ ಸಹಕಾರ, ಆಹಾರ ಕಿಟ್ ವಿತರಣೆ, ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛಾಲಯ ಸೇರಿದಂತೆ ಸುಮಾರು 580 ಕ್ಕಿಂತಲೂ ಅಧಿಕ ಸೇವಾ ಯೋಜನೆಗಳ ಮೂಲಕ ಮಾದರಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಮಾಡುತ್ತಾ ಸಮಾಜಕ್ಕೊಂದು ಉತ್ತಮ ಸಂದೇಶವನ್ನು ನೀಡುತ್ತಿರುವ ದೀಪಕ್ ಜಿ. ನೇತೃತ್ವದ ರಾಜಕೇಸರಿ ಸೇವಾ ಟ್ರಸ್ಟ್ ಯುವಕರ ತಂಡದ ಸೇವಾ ಕಾರ್ಯಗಳನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡುವತ್ತ ಸರ್ಕಾರ ಗಮನ ಹರಿಸಬೇಕಾಗಿದೆ ಎಂದರು.
ಗ್ರಾಮ ಪಂಚಾಯತ್ ನಾವೂರು ಅಧ್ಯಕ್ಷೆ ಸುನಂದ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಾವೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ ರಾಜಕೇಸರಿ ಸಂಘಟನೆಯ ಸಮಾಜಮುಖಿ ಸೇವಾ ಕಾರ್ಯಗಳು ಶ್ಲಾಘನೀಯ , ಇನ್ನಷ್ಟು ಸೇವಾ ಯೋಜನೆಗಳು ಮಾಡಲು ದೈವ ದೇವರುಗಳು ಅವರಿಗೆ ಶಕ್ತಿ ನೀಡಲಿ ಎಂದರು.
ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ವಿ.ಜಿ. ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಇಂತಹ ಆರೋಗ್ಯ ಶಿಬಿರಗಳ ಆಯೋಜನೆ ಬಹಳ ಮಹತ್ವವನ್ನು ಪಡೆಯುತ್ತದೆ. ಈ ನಿಟ್ಟಿನಲ್ಲಿ ರಾಜಕೇಸರಿ ಸಂಘಟನೆಯ ಕಾರ್ಯ ಅಭಿನಂದನೀಯ ಎಂದರು. ಶಾಲಾ ಮುಖ್ಯ ಶಿಕ್ಷಕಿ ರೋಹಿಣಿ ಮಾತನಾಡಿ ಈ ಭಾಗದಲ್ಲಿ ಮೊದಲ ಬಾರಿಗೆ ಹೃದಯಾ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.
ಯೇನಪೋಯ ಆಸ್ಪತ್ರೆ , ಪ್ರಸಾದ್ ನೇತ್ರಾಲಯದ ವೈದ್ಯರುಗಳು ಕಣ್ಣು ಹಾಗೂ ಹೃದಯ ಸಂಬಂಧಿ ಆರೋಗ್ಯದ ಮಾಹಿತಿ ನೀಡಿದರು. ಶ್ರೀ ದೇವಿ ಆಪ್ಟಿಕಲ್ಸ್ ನ ಮಂಜುಳ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಾವೂರು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಪ್ಪ ಗೌಡ, ಉಪಸ್ಥಿತರಿದ್ದರು. ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಸ್ವಾಗತಿಸಿದರು. ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.ಸತೀಶ್ ಕಂಗಿತ್ತಿಲ್ ಧನ್ಯವಾದವಿತ್ತರು. ನಾವೂರು ಸೇರಿದಂತೆ ನೂರಾರು ಜನರ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು. ರಾಜಕೇಸರಿ ಸಂಘಟನೆಯ ಸದಸ್ಯರು ಸಹಕರಿಸಿದರು.