ಬೆಳ್ತಂಗಡಿ: ಎಲ್ಲರ ಕಲ್ಯಾಣಕ್ಕಾಗಿ ಹಲವು ಸಮಾಜಮುಖಿ ಸೇವಾಕಾರ್ಯಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸದ್ಯದಲ್ಲೆ ಪ್ರಾರಂಭವಾಗಲಿದೆ. ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಘೋಷಿಸಿದರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸೆ28 ಆದಿತ್ಯವಾರ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳ ಗ್ರಾಮಸ್ಥರು ಸೇರಿ ಆಯೋಜಿಸಿದ ಸತ್ಯದರ್ಶನ ಸಮಾವೇಶದಲ್ಲಿ ಮಾತನಾಡಿದರು.
ಚಿನ್ನವನ್ನು ಬೆಂಕಿಗೆ ಹಾಕಿದರೆ ಅದು ಮತ್ತಷ್ಟು ಸ್ಪುಟಗೊಂಡು ಪರಿಶುದ್ಧವಾಗಿ ಹೊಳೆಯುತ್ತದೆ. ಅದೇ ರೀತಿ ಧರ್ಮಸ್ಥಳದ ಬಗ್ಗೆ ಷಡ್ಯಂತ್ರದಿಂದ ಸುಳ್ಳು ವದಂತಿ ಹರಡಿ ಅಪಚಾರ ಮಾಡಿದರೂ, ಷಡ್ಯಂತ್ರದ ಚಿದಂಬರ ರಹಸ್ಯ ಬಯಲಾಗಿ, ಪವಿತ್ರಕ್ಷೇತ್ರ ಇನ್ನಷ್ಟು ಬೆಳಗುತ್ತಿದೆ, ಬೆಳೆಯುತ್ತಿದೆ. ಈಗ ಇಲ್ಲಿಗೆ ಬರುವ ಭಕ್ತರು ಮತ್ತು ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ಭಕ್ತರು ಶ್ರದ್ಧಾ-ಭಕ್ತಿಯಿಂದ ಬಂದು ಸೇವೆ ಮಾಡುತ್ತಿದ್ದಾರೆ.
ಸರ್ಕಾರ ರಚಿಸಿದ ವಿಶೇಷ ತನಿಖಾ ದಳ (ಎಸ್.ಐ.ಟಿ)ದಿಂದ ಸತ್ಯದ ಅನಾವರಣವಾಗಿದ್ದು, ನಾವು ನಿರಾಳವಾಗಿದ್ದೇವೆ. ಆರಂಭದಲ್ಲೆ ಎಸ್.ಐ.ಟಿ. ರಚನೆಯನ್ನು ನಾನು ಸ್ವಾಗತಿಸಿ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದೆ. ಈಗಲೂ ಮತ್ತೊಮ್ಮೆ ಸರ್ಕಾರ ಮತ್ತು ಎಸ್.ಐ.ಟಿ.ಯನ್ನು ಅಭಿನಂದಿಸುವುದಾಗಿ ಹೆಗ್ಗಡೆಯವರು ತಿಳಿಸಿದರು.
ಇಂದಿನವರೆಗೆ ಮನದಾಳದಲ್ಲಿ ಕೊಂಚ ನೋವಿತ್ತು. ಚಿಂತನ-ಮಂಥನಕ್ಕೆ ಅವಕಾಶವಿರಲಿಲ್ಲ. ಆದರೆ ಇಂದು ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಸಂಘಟಿತರಾಗಿ ಬಂದು “ನಾವು ನಿಮ್ಮ ಹಿಂದೆ ಸದಾಕಾಲ ಇದ್ದೇವೆ” ಎಂದು ಪ್ರೀತಿ-ವಿಶ್ವಾಸ, ಗೌರವ ಮತ್ತು ಅಭಿಮಾನ ವ್ಯಕ್ತಪಡಿಸಿರುವುದರಿಂದ ತಾವು ತುಂಬಾ ಸಂತೋಷ ಮತ್ತು ತೃಪ್ತಿ ಹೊಂದಿರುವುದಾಗಿ ಹೆಗ್ಗಡೆಯವರು ತಿಳಿಸಿದರು.
ಒಂದು ಕುಟುಂಬದ ಕಾರ್ಯಕ್ರಮದಂತೆ ಎಲ್ಲರೂ ಸಂಭ್ರಮ-ಸಡಗರದಿಂದ ಭಾಗವಹಿಸಿರುವಿರಿ. ಈಗ ತಾವು ಸಂಪೂರ್ಣ ನಿರಾಳರಾಗಿದ್ದು ಅನೇಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮಸ್ಥರು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದು ಶ್ರದ್ಧಾ-ಭಕ್ತಿಯಿಂದ ಸೇವೆ ಮಾಡುತ್ತಿರುವುದು ಕ್ಷೇತ್ರದ ಸೌಹಾರ್ದಯುತ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲರೂ ನಿಮ್ಮ ಮನೆಯ ಹಾಗೂ ಗ್ರಾಮದ ಕಲ್ಯಾಣದ ಬಗ್ಗೆಯೂ ಪ್ರಾರ್ಥನೆ ಮಾಡಿಕೊಳ್ಳಿ. ಎಲ್ಲರಿಗೂ ಶುಭವಾಗಲಿ, ಭವಿಷ್ಯ ಉಜ್ವಲವಾಗಿ ಸುಖ-ಶಾಂತಿ, ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು. ಸತ್ಯದರ್ಶನ ಸಮಾವೇಶದಿಂದ ತಮಗೆ ಸಂತೋಷ ಮತ್ತು ತೃಪ್ತಿ ಉಂಟಾಗಿದೆ ಎಂದರು.
ಡಾ. ಪ್ರದೀಪ್ ನಾವೂರು ಮಾತನಾಡಿ, ದೇವರು ತನ್ನ ಪ್ರಿಯ ಭಕ್ತರ ಮೂಲಕ ಎಲ್ಲಾ ಲೋಕಕಲ್ಯಾಣ ಕಾರ್ಯಗಳನ್ನು ಮಾಡಿಸುತ್ತಾರೆ. ಅದೇ ರೀತಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥ ಸ್ವಾಮಿ, ಧರ್ಮದೇವತೆಗಳು ಹಾಗೂ ಅಣ್ಣಪ್ಪ ಸ್ವಾಮಿಯ ಅನುಗ್ರಹದೊಂದಿಗೆ ತಮ್ಮ ಕರ್ತವ್ಯ ಮತ್ತು ಧರ್ಮದ ನೆಲೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಲೋಕಕಲ್ಯಾಣ ಕಾರ್ಯಗಳನ್ನು ನಿರಂತರ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿ ಗೌರವಪೂರ್ವಕವಾಗಿ ಅಭಿನಂದಿಸಿದರು.
ಸತ್ಯದರ್ಶನ ಸಮಾವೇಶದ ಸಂಚಾಲಕ ಬೆಳ್ತಂಗಡಿಯ ವಕೀಲ ಸುಬ್ರಹ್ಮಣ್ಯ ಅಗರ್ತ ಸರ್ವರನ್ನೂ ಸ್ವಾಗತಿಸಿ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಪವಿತ್ರಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ ರಕ್ಷಣೆಗೆ ಇಡೀ ತಾಲೂಕಿನ ಎಲ್ಲಾ ಜನತೆ ಸದಾ ಕಟಿಬದ್ಧರಾಗಿರುವುದಾಗಿ ಭರವಸೆ ನೀಡಿದರು. ಅಪಪ್ರಚಾರ ಹಾಗೂ ಭ್ರಮೆಯನ್ನು ಸೃಷ್ಟಿಸಿದ ಗೊಂದಲಗಳ ನಿವಾರಣೆಯಾಗುತ್ತಿದ್ದು ಸತ್ಯದ ಸಾಕ್ಷಾತ್ಕಾರವಾಗುತ್ತಿದೆ. ಇಡೀ ಬೆಳ್ತಂಗಡಿ ತಾಲೂಕಿನ ಜನರಿಗೆ ತಾಲೂಕೇ ಮನೆಯಾಗಿದ್ದು ಧರ್ಮಸ್ಥಳ ದೇವರ ಕೋಣೆಯಾಗಿದೆ. ಹೆಗ್ಗಡೆಯವರೆ ಇಡೀ ಕುಟುಂಬದ ಯಜಮಾನರಾಗಿದ್ದು ಅವರೊಬ್ಬ “ಶ್ರೇಷ್ಠ ಸಾಮಾಜಿಕ ಸಂತ” ಎಂದು ಬಣ್ಣಿಸಿದರು. ಬೆಳ್ತಂಗಡಿ ತಾಲೂಕಿನ ಸಮಸ್ತರು ಧರ್ಮಸ್ಥಳದ ರಾಯಭಾರಿಗಳಾಗಿ ಧರ್ಮಕ್ಷೇತ್ರದ ಸೇವೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಶ್ರದ್ಧಾ ಅಮಿತ್ ಮತ್ತು ಮೈತ್ರಿನಂದೀಶ್ ಉಪಸ್ಥಿತರಿದ್ದರು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉಜಿರೆಯ ಜನಾರ್ದನಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದರು.
ಉಜಿರೆಯ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕ ಪ್ರೊ. ಸುವೀರ್ ಜೈನ್ ನೆಲ್ಲಿಕಾರು ಕಾರ್ಯಕ್ರಮ ನಿರ್ವಹಿಸಿದರು.
ಸಮಾವೇಶಕ್ಕೆ ಪೂರ್ವಭಾವಿಯಾಗಿ ಧರ್ಮಸ್ಥಳದ ದೇವಸ್ಥಾನದ ಅರ್ಚಕ ರಾಮಕೃಷ್ಣ ಕಲ್ಲೂರಾಯರ ನೇತೃತ್ವದಲ್ಲಿ ಚಂಡಿಕಾಹೋಮ ನಡೆಸಲಾಯಿತು. ಪೂರ್ಣಾಹುತಿ ಸಂದರ್ಭದಲ್ಲಿ ಹೆಗ್ಗಡೆಯವರು ಮತ್ತು ಕುಟುಂಬಸ್ಥರು , ಸತ್ಯದರ್ಶನ ಸಮಾವೇಶದ ಸಂಚಾಲಕ ಮೋಹನ್ ಕುಮಾರ್ ಉಜಿರೆ ಉಪಸ್ಥಿತರಿದ್ದರು.