ಬೆಳ್ತಂಗಡಿ:ಕುತೂಹಲಕ್ಕೆ ಕಾರಣವಾಗಿದ್ದ ಧರ್ಮಸ್ಥಳ ಬುರುಡೆ ಪ್ರಕರಣದ ನೈಜ ವಿಚಾರ ದಾಖಲಿಸಿಕೊಳ್ಳುವ ಸಲುವಾಗಿ ಆರೋಪಿ ಮಂಡ್ಯದ ಚಿನ್ನಯ್ಯ ಸಿ.ಎನ್.ಗೆ ಸೆ.25 ಬೆಳ್ತಂಗಡಿ ನ್ಯಾಯಾಲಯದಲ್ಲಿ ಈ ದಿನ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಕಲಾಪವನ್ನು ವಿಶೇಷವಾಗಿ ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.
ಸೆ 23 ರಂದು ಚಿನ್ನಯ್ಯನನ್ನು ಶಿವಮೊಗ್ಗ ಕಾರಾಗೃಹದಿಂದ ಕರೆತಂದು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ.ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಸಂಜೆ 3 ರಿಂದ 6 ಗಂಟೆವರೆಗೆ 3 ತಾಸು ನಿರಂತರ ಹೇಳಿಕೆ ನೀಡಿದ್ದ. ನ್ಯಾಯಾಲಯ ಅವಧಿ ಮುಗಿದಿದ್ದರಿಂದ ಮುಂದಿನ ಕಲಾಪವನ್ನು ಸೆ.25 ಕ್ಕೆ ಕಾಯ್ದಿರಿಸಿದ್ದರು. ಅದರಂತೆ ಇಂದು ಬೆಳಗ್ಗೆ 11 ಗಂಟೆಗೆ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಶಿವಮೊಗ್ಗ ಜೈಲಿನಿಂದ ಕರೆದುಕೊಂಡು ಬರಲಿದ್ದಾರೆ. ಬೆಳಗ್ಗಿನ ಸಾಮಾನ್ಯ ಕೋರ್ಟ್ ಕಲಾಪಗಳನ್ನು 11 ರಿಂದ 12 ರವೆಗೆ ಪೂರ್ಣಗೊಳಿಸಿ ಬಳಿಕ 12 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆರೋಪಿ ಚಿನ್ನಯ್ಯನಿಗಾಗಿ ಮಾತ್ರ ಕಾಲಾವಕಾಶ ನೀಡಲಿದೆ. ಉಳಿದ ಪ್ರಕರಣಗಳಿಗೆ ನ್ಯಾಯಾಧೀಶರು ಬೇರೆ ದಿನಾಂಕ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದ ಬುರುಡೆ ಪ್ರಕರಣ ದೇಶದಲ್ಲೇ ಬಹಳಷ್ಟು ಸಂಚಲನ ಮೂಡಿಸುವಂತೆ ಮಾಡಿದ್ದರಿಂದ ಇದೊಂದು ಸೂಕ್ಷ್ಮ ಹಾಗೂ ವಿಶೇಷ ಪ್ರಕರಣವಾಗಿರುವ ಹಿನ್ನೆಲೆ ನ್ಯಾಯಾಧೀಶರು ಇವತ್ತು ಚಿನ್ನಯ್ಯನ ಹೇಳಿಕೆಗೆ ಮಾತ್ರ ಮೀಸಲಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.