ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಕಳೆದ ಕೆಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಷಡ್ಯಂತ್ರದ ಪೊರೆ ಕಳಚುತ್ತಿದ್ದು, ಇಡೀ ದೇಶಕ್ಕೆ ಸತ್ಯದ ಅನಾವರಣ ಆಗುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಪೂಜ್ಯ ಹೆಗ್ಗಡೆಯವರ ನಿಷ್ಕಲ್ಮಶ ವ್ಯಕ್ತಿತ್ವದ ಶ್ರೇಷ್ಟತೆಯನ್ನು ಹಿಂದಿನಿಂದಲೂ ಒಪ್ಪಿಕೊಂಡು ಬಂದ ಬೆಳ್ತಂಗಡಿ ತಾಲೂಕಿನ ಸಮಸ್ತ ಭಕ್ತಾದಿಗಳು ಒಟ್ಟಾಗಿ ದೈವ ದೇವರುಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸುವ ಮತ್ತು ಸತ್ಯ, ನ್ಯಾಯದ ಜೊತೆಗೆ ನಾವು ಎಂದಿಗೂ ಇರುತ್ತೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ಧೇಶದಿಂದ ಇದೇ ಬರುವ ಸೆಪ್ಟೆಂಬರ್ 28 ನೇ ಭಾನುವಾರ ಶ್ರೀ ಕ್ಷೇತ್ರದಲ್ಲಿ ಒಂದಾಗಿ ಪವಿತ್ರವಾದ ಚಂಡಿಕಾ ಯಾಗ ಮತ್ತು ಸತ್ಯ ದರ್ಶನ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಶ್ರೀ ಚಂಡಿಕಾ ಯಾಗಕ್ಕೆ ತಾಲೂಕಿನ ಎಲ್ಲಾ ಗ್ರಾಮಗಳ ವತಿಯಿಂದ ಸಮರ್ಪಿಸಲ್ಪಡುವ ಫಲ ಪುಷ್ಪಗಳ ಸಮರ್ಪಣೆಯ ಮೆರವಣಿಗೆಯ ಮೆರವಣಿಗೆ ಬೆಳಿಗ್ಗೆ 9-45 ಕ್ಕೆ ಶ್ರೀ ಕ್ಷೇತ್ರದ ಮಹಾದ್ವಾರದಿಂದ ಪ್ರಾರಂಭಗೊಂಡು ,ಯಾಗ ಮಂಟಪವುಳ್ಳ ಅಮೃತವರ್ಷಿಣಿ ಸಭಾಂಗಣದವರೆಗೆ ನಡೆಯಲಿದೆ.10.30 ಕ್ಕೆ ಸರಿಯಾಗಿ ಪೂಜ್ಯ ಧರ್ಮಾಧಿಕಾರಿಗಳ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿಯು ವೇದ ವಿದ್ವಜ್ಜರ ಮೂಲಕ ನಡೆಯಲಿದೆ.ಪೂರ್ವಾಹ್ನ 11 ಗಂಟೆಗೆ ಸರಿಯಾಗಿ ಸತ್ಯದರ್ಶನ ಸಮಾವೇಶ ನಡೆಯಲಿದ್ದು, ಪೂಜ್ಯ ಹೆಗ್ಗಡೆಯವರು ತಾಲೂಕಿನ ಜನತೆಗೆ ಆಶೀರ್ವಚನಪೂರಕವಾದ ಸಂದೇಶವನ್ನು ನೀಡಲಿದ್ದಾರೆ.ತಾಲೂಕಿನ ಸಮಸ್ತ ಬಂಧುಗಳು ಈ ಪುಣ್ಯ ಹಾಗೂ ನ್ಯಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಚಂಡಿಕಾಯಾಗ , ಸತ್ಯದರ್ಶನ ಸಮಾವೇಶ ಸಂಚಾಲನಾ ಸಮಿತಿಯ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ ಹಾಗೂ
ಸುಬ್ರಹ್ಮಣ್ಯ ಕುಮಾರ್ ಅಗರ್ತ , ಪತ್ರಿಕಾ ಪ್ರಕಟಣೆಯ ಮೂಲಕ ತಾಲೂಕಿನ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.