ಹಿಂದುಳಿದ ವರ್ಗಗಳ ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆ: ಜಾತಿ ಕಾಲಂ ನಲ್ಲಿ “ಬಿಲ್ಲವ” ಮಾತ್ರ ನಮೂದಿಸಿ, ಶ್ರೀ ಗುರು ನಾರಾಯಣ ಸೇವಾ ಸಂಘ ಮಾಹಿತಿ :

 

 

ಬೆಳ್ತಂಗಡಿ; ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ.22 ರಿಂದ ನಡೆಯುವ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಬಿಲ್ಲವ ಸಮುದಾಯದ ಪ್ರತಿಯೊಬ್ಬರು ಜಾತಿ ಕಾಲಂ ನಂ 9ರಲ್ಲಿ ಕಡ್ಡಾಯವಾಗಿ ‘ಬಿಲ್ಲವ ‘ ಎಂದೇ ನಮೂದಿಸಬೇಕು ಎಂದು ಬೆಳ್ತಂಗಡಿ ತಾಲೂಕು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಸೆ 22ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ  ಈ ಬಗ್ಗೆ ಮಾಹಿತಿ‌ ನೀಡಿದರು.

ಸರಕಾರದ ಎಲ್ಲಾ ಮೀಸಲಾತಿ, ಸೌಲಭ್ಯಗಳು ಜನಸಂಖ್ಯೆಯ ಆಧಾರದಲ್ಲಿ ನಿರ್ಧಾರ ವಾಗುವುದರಿಂದ, ಬಿಲ್ಲವರೆಲ್ಲರೂ 9ನೇ ಜಾತಿ ಕಾಲಂನಲ್ಲಿ ಬಿಲ್ಲವ ಎಂದು ಮಾತ್ರ  ನಮೂದಿಸಬೇಕು. ಯಾರೂ ಕೂಡ  ತಮ್ಮ ‘ಬರಿ’ಯನ್ನು (ಸರ್‌ನೇಮ್ ಉದಾ- ಬಂಗೇರ, ಸಾಲಿಯಾನ್, ಸುವರ್ಣ, ಇತ್ಯಾದಿ… ) ನೀಡಬಾರದು.
ಹಿಂದಿನ ಜಾತಿಗಣತಿ ವೇಳೆ ಬಿಲ್ಲವರು ತಮ್ಮ ‘ಜಾತಿ’ಯನ್ನು ನಮೂದಿಸುವಾಗ ಬರಿಯನ್ನು ಜಾತಿಯಾಗಿ ನೀಡಿದ್ದರಿಂದ ಬಿಲ್ಲವರ ಸಂಖ್ಯೆ ತೀರಾ ಕಡಿಮೆ ಬಂದಿತ್ತು. ಕಾರಣ ಕೆಲವು ಸರ್‌ನೇಮ್‌ಗಳು ಉಳಿದ ಜಾತಿಗಳ ಸರ್‌ನೇಮ್ ಒಂದೇ ಆಗಿರುವುದರಿಂದ ಗೊಂದಲವಾಗಿತ್ತು. ಹೀಗಾಗಿ ಈ ಗೊಂದಲವನ್ನು ತಪ್ಪಿಸಲು ಕರಾವಳಿಯ ಬಿಲ್ಲವರೆಲ್ಲರೂ ಹೆಸರನ್ನು ಸರಿಯಾಗಿ ನೀಡಿ 9ನೇ ಜಾತಿ ಕಾಲಂನಲ್ಲಿ ‘ಬಿಲ್ಲವ’ ಎಂದೇ ಬರೆಸಬೇಕು. 10ನೇ ಉಪಜಾತಿ ಕಾಲಂನಲ್ಲಿ ಅನ್ವಯಿಸುವುದಿಲ್ಲ ಎಂದು ಬರೆಯಬೇಕು. ಅಲ್ಲದೇ 11ನೇ ಕಾಲಂನ ಜಾತಿಗೆ ಇರುವ ಸಮಾನರ್ಥಕ ಹೆಸರು ಎಂದು ಇರುವಲ್ಲಿ ಅನ್ವಯಿಸುವುದಿಲ್ಲ ಎಂದೇ ಬರೆಯಬೇಕು.

ಕರ್ನಾಟಕದಲ್ಲಿ ಈಗ 26 ಒಳ ಪಂಗಡಗಳಿರುವ ಬಿಲ್ಲವ ಸಮುದಾಯದ ಜನಸಂಖ್ಯೆ 40ರಿಂದ 50ಲಕ್ಷವಿದ್ದು, ಬಿಲ್ಲವ ಜಾತಿಯಡಿ ಬರಲಿದ್ದು, ಕರಾವಳಿಯ ಬಿಲ್ಲವರು ಮಾತ್ರ ಕಡ್ಡಾಯವಾಗಿ ಜಾತಿಯನ್ನು ‘ಬಿಲ್ಲವ’ ಎಂದೇ ನಮೂದಿಸುವಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮುದಾಯ ನಾಯಕರು ಒಮ್ಮೆತದಿಂದ ನಿರ್ಧರಿಸಿದ್ದೇವೆ ಎಂದು ತಿಳಿಸಿದರು

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮಾಜಿ‌ ಅಧ್ಯಕ್ಷರುಗಳಾದ ಜಯರಾಂ ಬಂಗೇರ, ಚಿದಾನಂದ‌ಪೂಜಾರಿ, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ‌ಕಾರ್ಯದರ್ಶಿ ನಿತೇಶ್ ಹೆಚ್, ಕೊಶಾಧಿಕಾರಿ ಪ್ರಶಾಂತ್ ಕುಮಾರ್ ಮಚ್ಚಿನ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ.ಕೆ ಪ್ರಸಾದ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಶುಭಕರ ಸಾವ್ಯ, ಚಂದ್ರಶೇಖರ್ ಇಂದಬೆಟ್ಟು, ರವೀಂದ್ರ ಬಿ ಅಮೀನ್, ರೂಪೇಶ್ ಧರ್ಮಸ್ಥಳ  ಹಾಗೂ ಇತರರು ಇದ್ದರು.

error: Content is protected !!