ಗುರುವಾಯನಕೆರೆಯಿಂದ ಧರ್ಮಸ್ಥಳಕ್ಕೆ ಬೃಹತ್ ವಾಹನ ಜಾಥಾ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ  ಜೈನ ಸಮಾಜದಿಂದ ಗೌರವಾರ್ಪಣೆ ಎಸ್.ಐ.ಟಿ. ತನಿಖೆಯಿಂದ ಸತ್ಯದ ಸಾಕ್ಷಾತ್ಕಾರ ಸಂತಸದಾಯಕ, ವೀರೇಂದ್ರ ಹೆಗ್ಗಡೆ:

 

 

ಬೆಳ್ತಂಗಡಿ: ಸತ್ಯದ ಸತ್ವ ಪರೀಕ್ಷೆಯ ಕಾಲ ಇದಾಗಿದ್ದು ಎಸ್.ಐ.ಟಿ. ತನಿಖೆಯಿಂದ ಅನೇಕ ಸತ್ಯಾಂಶಗಳು ನಮಗೆ ನ್ಯಾಯಯುತವಾಗಿ ಪೂರಕವಾಗಿ ಪ್ರಕಟವಾಗುತ್ತಿದ್ದು, ಸತ್ಯದ ಸಾಕ್ಷಾತ್ಕಾರವಾಗುತ್ತಿರುವುದು ಸಂತಸದಾಯಕವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಅವಿಭಜಿತ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಿಂದ ಬೆಳ್ತಂಗಡಿ ತಾಲ್ಲೂಕು ಜೈನಸಮಾಜ ಬಾಂಧವರ ಆಶ್ರಯದಲ್ಲಿ ಬೆಳ್ತಂಗಡಿ ಜೈನಪೇಟೆಯಲ್ಲಿರುವ ಬಸದಿಯಿಂದ ಧರ್ಮಸ್ಥಳಕ್ಕೆ ಬೃಹತ್ ವಾಹನಜಾಥಾದಲ್ಲಿ ಬಂದ ಸಮಾಜಬಾಂಧವರಿಗೆ ಶುಭ ಹಾರೈಸಿ ಮಾತನಾಡಿದರು.

 

 

ಧರ್ಮಸ್ಥಳದಲ್ಲಿ ಹುಟ್ಟಿದ ತಾವು ಮತ್ತು ಕುಟುಂಬಸ್ಥರೆಲ್ಲರೂ ಅದೃಷ್ಟಶಾಲಿಗಳು ಹಾಗೂ ಭಾಗ್ಯವಂತರು. ಭಗವಾನ್ ಚಂದ್ರನಾಥ ಸ್ವಾಮಿ, ಶ್ರೀ ಮಂಜುನಾಥ ಸ್ವಾಮಿ, ಅಣ್ಣಪ್ಪಸ್ವಾಮಿ ಹಾಗೂ ಧರ್ಮದೇವತೆಗಳ ಸೇವೆ ಮಾಡುವ ಸುವರ್ಣಾವಕಾಶ ತಮಗೆ ದೊರೆತಿರುವುದು ಬದುಕಿನ ಸೌಭಾಗ್ಯವಾಗಿದೆ. ಜಡಿಮಳೆಯನ್ನೂ ಲೆಕ್ಕಿಸದೆ ಪ್ರೀತಿ-ವಿಶ್ವಾಸ ಹಾಗೂ ಅತೀವ ಅಭಿಮಾನದಿಂದ ಧರ್ಮಸ್ಥಳಕ್ಕೆ ಬಂದು ಎಲ್ಲರೂ ಗೌರವ ಅರ್ಪಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಸರ್ವರಿಗೂ ದೇವರು ಸಕಲ ಸನ್ಮಂಗಲವನ್ನುಂಟುಮಾಡಲಿ ಎಂದು ಹಾರೈಸಿದರು.
ಪ್ರೀತಿ-ವಿಶ್ವಾಸದ ದ್ಯೋತಕವಾದ ಘೋಷಣೆಗಳು ತಮಗೆ ಅತೀವ ಇಷ್ಟವಾಯಿತು ಎಂದು ಹೆಗ್ಗಡೆಯವರು ಶ್ಲಾಘಿಸಿದರು.

 

 

 

ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದ ಮೂರು ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ಪ್ರಸಾದವನ್ನು ಹೆಗ್ಗಡೆಯವರು ಮತ್ತು ಕುಟುಂಬಸ್ಥರಿಗೆ ಬಸದಿಯ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರ ಮತ್ತು ಬಳಗದವರು ನೀಡಿದರು.

 

 

ಸುಮಾರು ಆರುನೂರಕ್ಕೂ ಮಿಕ್ಕಿ ವಾಹನಗಳಲ್ಲಿ ಬಂದ ಮೂರು ಸಾವಿರಕ್ಕೂ ಮಿಕ್ಕಿದ ಅಭಿಮಾನಿಗಳು ಮುಖ್ಯ ಪ್ರವೇಶದ್ವಾರದ ಬಳಿಕ ಹೆಗ್ಗಡೆಯವರ ಪರವಾಗಿ ಘೋಷಣೆಗಳನ್ನು ಹಾಕಿ ದೇವಸ್ಥಾನದ ಎದುರಿನಿಂದ ಅಮೃತವರ್ಷಿಣಿ ಸಭಾಭವನಕ್ಕೆ ನಡೆದುಕೊಂಡು ಹೋದರು.

 

“ಖಾವಂದರೊಂದಿಗೆ ನಾವಿದ್ದೇವೆ” “ನಮ್ಮ ಖಾವಂದರು ನಮಗೆ ಹೆಮ್ಮೆ” “ನಮ್ಮ ಖಾವಂದರು ನಮಗೆ ಆಸ್ತಿ” ಮೊದಲಾದ ಘೋಷಣೆಗಳನ್ನು ಶ್ರದ್ಧಾ-ಭಕ್ತಿಯಿಂದ ಮಾಡಿದರು.

 

 

ಬಳಿಕ ವಿಶ್ವಶಾಂತಿಗಾಗಿ ಒಂಭತ್ತು ಬಾರಿ ಪಂಚನಮಸ್ಕಾರ ಮಂತ್ರದ ಸಾಮೂಹಿಕ ಪಠಣ ಮಾಡಲಾಯಿತು.
ನಂತರ ಎಲ್ಲರೂ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಗೆ ಹೋಗಿ ದೇವರ ದರ್ಶನ ಮಾಡಿ, ಅಲ್ಲಿ ಕೂಡಾ ವಿಶ್ವಶಾಂತಿಗಾಗಿ ಪಂಚನಮಸ್ಕಾರ ಮಂತ್ರವನ್ನು ಒಂಭತ್ತು ಬಾರಿ ಸಾಮೂಹಿಕ ಪಠಣ ಮಾಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ. ನೀತಾ ರಾಜೇಂದ್ರ ಕುಮಾರ್, ಅಮಿತ್, ಶ್ರದ್ಧಾ ಅಮಿತ್ ಮತ್ತು ಡಿ. ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.

error: Content is protected !!