ಬೆಳ್ತಂಗಡಿ; ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಹಿರಿಯಡ್ಕ ಜೈಲಿನಲ್ಲಿರುವ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಲಯ ಶನಿವಾರ (ಆ.23) ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.
ಅವಹೇಳನಕಾರಿ ಹೇಳಿಕೆ ನೀಡಿದ್ದ ಬಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಮಹೇಶ್ ತಿಮರೋಡಿ ವಿರುದ್ಧ ದೂರು ದಾಖಲಾಗಿತ್ತು. ಕಳೆದ ಗುರುವಾರ (ಆ.21) ಬ್ರಹ್ಮಾವರ ಪೊಲೀಸರು ಉಜಿರೆಯ ತಿಮರೋಡಿ ನಿವಾಸಕ್ಕೆ ತೆರಳಿ ಅವರನ್ನು ಬಂಧಿಸಿದ್ದರು. ಈ ವೇಳೆ ಹೈಡ್ರಾಮಾ ನಡೆದಿತ್ತು. ಅದೇ ದಿನ ಪೊಲೀಸರು ಕೋರ್ಟ್ ಎದುರು ಅವರನ್ನು ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆದರೆ ಇದೀಗ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಮಹೇಶ್ ಶೆಟ್ಟಿ ತಿಮರೋಡಿಯ ಜಾಮೀನು ಅರ್ಜಿ ವಿಚಾರಣೆಯನ್ನು ಆ. 23ರಂದು ಬೆಳಗ್ಗೆ 11ರಿಂದ ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ನಡೆದಿದ್ದು ಅರ್ಜಿ ವಿಚಾರಣೆ ವೇಳೆ ಸಹಾಯಕ ಸರಕಾರಿ ಅಭಿಯೋಕರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಲಯದ ಮುಂದೆ ನಿವೇದನೆ ಮಾಡಿದ್ದಾರೆ. ಅದರಂತೆ ಮಧ್ಯಾಹ್ನ ಒಂದು ಗಂಟೆಯ ಒಳಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿತ್ತು ಆದರೆ ಪೊಲೀಸರು ಹಿರಿಯಡ್ಕ ಜೈಲಿನಲ್ಲಿದ್ದ ತಿಮರೋಡಿ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಧ್ಯಾಹ್ನ 1:30 ಸುಮಾರಿಗೆ ಕೋರ್ಟಿಗೆ ಹಾಜರು ಪಡಿಸಿದರು ಈ ವೇಳೆ ಪೊಲೀಸರನ್ನೇ ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ನಿಮ್ಮಲ್ಲಿಯೇ ವೈಫಲ್ಯ ಇರುವಾಗ ಮತ್ತೆ ಕಸ್ಟಡಿಗೆ ಯಾಕೆ ಎಂದು ಪ್ರಶ್ನೆ ಮಾಡಿ ಮಧ್ಯಾಹ್ನ 3.30 ಕ್ಕೆ ಕೋರ್ಟ್ ಗೆ ಹಾಜರು ಪಡಿಸುವಂತೆ ಸೂಚಿಸಿದೆ.
ಅದರಂತೆ ಸಂಜೆ ವಿಚಾರಣೆ ನಡೆಸಿದ ನ್ಯಾಯಾಲಯ ತಿಮರೋಡಿ ಅವರ ಅರೋಗ್ಯದ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.