ಬೆಳ್ತಂಗಡಿ: ಚತುರ್ವಿಧ ದಾನಗಳಿಂದ ಪ್ರಸಿದ್ಧಿ ಪಡೆದಿರುವ ಪುಣ್ಯ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇತರ ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವದಂತಿ ಹಾಗೂ ಅಪಪ್ರಚಾರ ತಡೆಯಲು ಮತ್ತು ಎಲ್ಲಾ ಪ್ರಕರಣಗಳು ಶೀಘ್ರ ಇತ್ಯರ್ಥವಾಗಲಿ ಎಂದು ಪ್ರಾರ್ಥಿಸಿ ಬೆಂಗಳೂರಿನಿಂದ ಬಂದ ಕನ್ನಡಿಗರ ರಕ್ಷಣಾ ವೇದಿಕೆಯ ಅಧ್ಯಕ್ಷ ಕನ್ನಡ ಪ್ರಕಾಶ್ ನೇತೃತ್ವದಲ್ಲಿ ಶುಕ್ರವಾರ ಧರ್ಮಸ್ಥಳಕ್ಕೆ ಭಕ್ತರು ಬಂದು ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳವು ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಪುಣ್ಯಸ್ಥಳವಾಗಿದೆ. ದೇಶ-ವಿದೇಶಗಳಲ್ಲಿ ಧರ್ಮಸ್ಥಳದ ಲಕ್ಷಾಂತರ ಮಂದಿ ಭಕ್ತರಿದ್ದಾರೆ.
ಇಂತಹ ಪವಿತ್ರ ಕ್ಷೇತ್ರಕ್ಕೆ ಅಪಪ್ರಚಾರ ಸಲ್ಲದು. ಈಗಾಗಲೆ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದ್ದು, ಪ್ರಕರಣ ಶೀಘ್ರ ನ್ಯಾಯಯುತವಾಗಿ ಇತ್ಯರ್ಥವಾಗಲಿ ಎಂದು ಅವರು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪುರುಷರು ಮತ್ತು ಮಹಿಳೆಯರೂ ಸೇರಿದಂತೆ ಮೂವತ್ತಕ್ಕಿಂತಲೂ ಹೆಚ್ಚು ಭಕ್ತರು ಆಗಮಿಸಿದ್ದರು.
ದೇವರ ದರ್ಶನದ ಬಳಿಕ “ಅನ್ನಪೂರ್ಣ” ಭೋಜನಾಲಯದಲ್ಲಿ ಪ್ರಸಾದ ಸ್ವೀಕರಿಸಿ ಬೆಂಗಳೂರಿಗೆ ಪ್ರಯಾಣಿಸಿದರು.