ಬೆಳ್ತಂಗಡಿ : ಮದುವೆ ಕಾರ್ಯಕ್ರಮವೊಂದ ಆರತಕ್ಷತೆ ಔತಣ ಕೂಟದಲ್ಲಿ ಊಟ ಮಾಡಿದ ನಂತರ ವರ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು ಈ ಪೈಕಿ ಮಹಿಳೆಯೊಬ್ಬರು ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು 5 ಮಂದಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮಾಲೆಸರ ಎಂಬಲ್ಲಿನ ನಿವಾಸಿ ಕಮಲ ಎಂಬವರು ಮದುವೆಯ ಆರತಕ್ಷತೆಯ ಊಟ ಮಾಡಿದ ಮೇಲೆ ವಾಂತಿ ಭೇದಿಯೊಂದಿಗೆ ತೀವ್ರ ಅಸ್ವಸ್ಥಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಇದೀಗ ಮೃತಪಟ್ಟಿದ್ದಾರೆ.
ಬಂದಾರು ಕೊಪ್ಪದಡ್ಕ ಸಮೀಪದ ಮನೆಯಲ್ಲಿ
ಮದುವೆಯ ಮರುದಿನ ನಡೆದ ಆರತಕ್ಷತೆ ಔತಣ ಕೂಟದಲ್ಲಿ ಪಾಲ್ಗೊಂಡು ಮಾಂಸಾಹಾರದ ಭೋಜನ ಸೇವಿಸಿದ ಬೆನ್ನಲ್ಲೇ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ಐವತ್ತಕ್ಕೂ ಅಧಿಕ ಮಂದಿ ವಾಂತಿ ಭೇದಿ ಮತ್ತಿತರ ರೀತಿಯಲ್ಲಿ ಅಸ್ವಸ್ಥರಾಗಿ ಮಂಗಳೂರು ವೆನ್ಲಾಕ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಮೇ 11ನೇ ಭಾನುವಾರ ನಡೆದ ಮದುವೆಯ ಆರತಕ್ಷತೆಯು ಮೇ12 ಸೋಮವಾರ ವಧುವಿನ ಮನೆಯಲ್ಲಿ ನಡೆದಿತ್ತು.
ಆರತಕ್ಷತೆಯ ಊಟದ ಬೆನ್ನಲ್ಲೇ ಕೆಲವರಲ್ಲಿ ಸೋಮವಾರ ರಾತ್ರಿ ಹಾಗೂ ಇನ್ನೂ ಕೆಲವರಲ್ಲಿ ಮಂಗಳವಾರ ಬೆಳಿಗ್ಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡವರನ್ನು ಕೂಡಲೇ
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಹಾಗೂ ಉಜಿರೆ, ಉಪ್ಪಿನಂಗಡಿ ಮತ್ತಿತರ ಕಡೆಗಳ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.