ಬೆಳ್ತಂಗಡಿ : ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡಿದ ಪ್ರಕರಣ ಸಂಬಂಧ ಪುಂಜಾಲಕಟ್ಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿ ವಸಂತಿ ಹೆಗ್ಡೆ ಮನೆಯಿಂದ ಏ.20 ರಂದು ಮಧ್ಯಾಹ್ನ ಯಾರು ಇಲ್ಲದ ವೇಳೆ ಕಳ್ಳರು ಮನೆಯ ಮುಂದಿನ ಬಾಗಿಲು ಮುರಿದು ಮನೆಯೊಳಗೆ ಪ್ರವೇಶ ಮಾಡಿ 30 ಸಾವಿರ ಹಣ ಮತ್ತು 13,72,000 ಮೌಲ್ಯದ 160.5 ಗ್ರಾಂ ಚಿನ್ನಭರಣ ಸೇರಿ ಒಟ್ಟು 14,02,000 ಮೌಲ್ಯವನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಏ.20 ರಂದು ಕಲಂ 331(3),305 BNS 2023 ರಂತೆ ಪ್ರಕರಣ ದಾಖಲಾಗಿ ತನಿಖೆ ಮಾಡುತ್ತಿದ್ದರು.ಆರೋಪಿಗಳ ಪತ್ತೆ ಮಾಡಲು ವಿವಿಧ ಅಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾಗ ತಾಂತ್ರಿಕ ಅಂಶಗಳಿಂದ ಇಬ್ಬರು ಆರೋಪಿಗಳ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಆರೋಪಿಗಳ ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಗಾರೆ ಅಂಚೆ ಅಂಗಡಿಹಳ್ಳಿ ಮನೆ ಬುಡ್ಡ ಯಲ್ಲಪ್ಪ ಮಗ ಶಿವರಾಜ್@ ಶಿವಕೇರಿ (31) ಮತ್ತು ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಿವಾಸಿಯಾಗಿದ್ದು,ಮಂಗಳೂರು ನಗರ ಸುರತ್ಕಲ್ ಕೃಷ್ಣಪುರ 6 ನೇ ಬ್ಲಾಕ್ ನಿವಾಸಿ(ಬಾಡಿಗೆ ಮನೆಯಲ್ಲಿರುವ) ಮುನಿಯಪ್ಪ ಮಗ ಸಂತೋಷ್ (26) ನನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಮೇ.4 ರಂದು ಸಂಜೆ ಮಂಗಳೂರು ನಗರದ ಪಡೀಲ್ ಬಳಿ ಬೈಕ್ ನಲ್ಲಿ ಬಂಟ್ವಾಳ ಕಡೆ ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಡಿಯೋ ಸ್ಕೂಟರ್ ಹಾಗೂ ಕಳ್ಳತನ ಮಾಡಿದ್ದ ಸುಮಾರು 100 ಗ್ರಾಂ ಚಿನ್ನಾಭರಣ ಇದರ ಮೌಲ್ಯ ಸುಮಾರು 9 ಲಕ್ಷ ಮೌಲ್ಯ ಅಗಿದ್ದು ಇವುಗಳನ್ನು ಪೊಲೀಸರು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮುಖ ಆರೋಪಿ ಶಿವರಾಜ್ @ ಶಿವಕೇರಿ ವಿರುದ್ಧ ಉಡುಪಿ , ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಮಡಿಕೇರಿ ,ಕೋಲಾರದಲ್ಲಿ ಕಳ್ಳತನ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಬಂಧಿತ ಆರೋಪಿಗಳಿಬ್ಬರನ್ನು ಪುಂಜಾಲಕಟ್ಟೆ ಪೊಲೀಸರು ಮೇ.5 ರಂದು ಸಂಜೆ ಬೆಳ್ತಂಗಡಿ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಧೀಶರು ಮನು.ಬಿ.ಕೆ ಮುಂದೆ ಹಾಜರುಪಡಿಸಿದ್ದು. ಆರೋಪಿಗಳಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದು. ಆರೋಪಿಗಳಿಬ್ಬರನ್ನು ಪೊಲೀಸರು ಮಂಗಳೂರು ಸಬ್ ಜೈಲಿಗೆ ಕಳುಹಿಸಿದ್ದಾರೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಪುಂಜಾಲಕಟ್ಟೆ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಎಮ್.ಎಮ್ ತಂಡದ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.