ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಕೋಮು ದ್ವೇಷದ ಭಾಷಣ ಆರೋಪ :ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲು:

 

 

 

ಬೆಳ್ತಂಗಡಿ: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಭಟ್ರಬೈಲು ತೆಕ್ಕಾರು ಇಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ ಗ್ರಾಮದ ಮುಸ್ಲಿಮರ ಬಗ್ಗೆ ಮಾನಹಾನಿಕಾರ ಮತ್ತು ಕೋಮು ಪ್ರಚೋದನೆಯಿಂದ ಕೂಡಿದ ದ್ಷೇಷ ಭಾಷಣವನ್ನು ಮಾಡಿದ್ದಾರೆ ಎಂದು ಆರೋಪಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಶಾಸಕ ಹರೀಶ್ ಪೂಂಜ‌ ವಿರುದ್ದ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.
ದ್ವೇಷ ಭಾಷಣ ಸಂಬಂಧ ಸ್ಥಳೀಯ ಮುಸ್ಲಿಂ ಮುಖಂಡ ಎಸ್ ಎಂ ಎಸ್ ಇಬ್ರಾಹಿಂ ಮುಸ್ಲಿಯಾರ್ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು, ದೂರಿನ‌ ಅನ್ವಯ
ಬಿಎನ್ ಎಸ್ ಕಾಯ್ದೆ ಕಲಂ 196, 353(2) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶನಿವಾರ ರಾತ್ರಿ ಜರುಗಿತು. ಇದರಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅವರು ಗ್ರಾಮದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ದ್ವೇಷ ಪೂರಿತವಾಗಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
“ದೇವಾಲಯದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಸ್ಲಿಂ ಮಸೀದಿಗಳಿಗೆ ಏಕೆ ನೀಡಿದ್ದೀರಿ? ನಮಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ನೀವು ಮುಸ್ಲಿಮರಿಗೆ ಆಹ್ವಾನ ಪತ್ರಿಕೆ ನೀಡಿದ್ದರಿಂದಲೇ ಅವರು ಟ್ಯೂಬ್ ಲೈಟ್ ಹೊಡೆದಿದ್ದಾರೆ ಎಂದು ಹರೀಶ್ ಪೂಂಜಾ ಆರೋಪಿಸಿದ್ದರು.
ಬಹಳ ಸೂಕ್ಷ್ಮ ಸನ್ನಿವೇಶದಲ್ಲಿ, ಶಾಸಕ ಹರೀಶ್ ಪೂಂಜಾ ಅವರು ದ್ವೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಮುಸ್ಲಿಂ ಮುಖಂಡ ಎಸ್ಎಂಎಸ್ ಇಬ್ರಾಹಿಂ ಮುಸ್ಲಿಯಾರ್ ಅವರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಪೊಲೀಸರು ವಿಡೀಯೋಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!