ಮಂಗಳೂರು:ಮಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 75 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ರಾಜ್ಯ ಪೊಲೀಸ್ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಾದಕ ವಸ್ತು ವಶಕ್ಕೆ ಪಡೆದ ಕಾರ್ಯಾಚರಣೆ ಇದಾಗಿದೆ.
ಈ ಕಾರ್ಯಾಚರಣೆಯಲ್ಲಿ ದೇಶಾದ್ಯಂತ ಎಂಡಿಎಂಎ ಮಾರಾಟ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಲಾಗಿದೆ. ಬೆಂಬಾ ಫೆಂಟಾ ಅಲಿಯಾಸ್ ಅಡೋನಿಸ್ (31) ಮತ್ತು ಅಬಿಗಾಲಿ ಅಡೋನಿಸ್ (30) ಬಂಧಿತರು.
“ಡ್ರಗ್ಸ್ ಫ್ರಿ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ನಗರ ಸೇರಿ ರಾಜ್ಯಕ್ಕೆ ಹಾಗೂ ಇತರ ರಾಜ್ಯಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಮಹಿಳಾ ಪ್ರಜೆಗಳಿಬ್ಬರನ್ನು ಬಂಧಿಸಿ, 75 ಕೋಟಿ ಮೌಲ್ಯದ 37.870 ಕೆ.ಜಿ ನಿಷೇಧಿತ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
“2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಂಪ್‌ವೆಲ್ ಬಳಿಯ ಲಾಡ್ಜ್‌ವೊಂದರಲ್ಲಿ ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಹೈದರ್ ಯಾನೆ ಹೈದರ್ ಅಲಿ ಎಂಬಾತನನ್ನು ಬಂಧಿಸಿ 15 ಗ್ರಾಂ MDMA ವಶಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಡ್ರಗ್ ಪೆಡ್ಲರ್ಗಳನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು. ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಕೈಗೊಂಡು ಪ್ರಕರಣದಲ್ಲಿ ಹೈದರ್ ಅಲಿ ಮತ್ತು ಇನ್ನಿತರ ವ್ಯಕ್ತಿಗಳಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್ ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ದೇಶದ ವಿದೇಶಿ ಪ್ರಜೆ ಪೀಟರ್ ಎಂಬಾತನನ್ನು ಬಂಧಿಸಿ ಆತನಿಂದ 6.248 ಕೆ.ಜಿ MDMAಯನ್ನು ಈ ಹಿಂದೆ ವಶಪಡಿಸಿಕೊಳ್ಳಲಾಗಿತ್ತು” ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
“ಈ ಪ್ರಕರಣದಲ್ಲಿ ಬೆಂಗಳೂರಿನ ಪೆಡ್ಲರ್ ಪೀಟರ್ ಎಂಬಾತನಿಗೆ ಮಾದಕ ವಸ್ತು ಪೂರೈಕೆ ಮಾಡುವ ಕಿಂಗ್ ಫಿನ್ ಡ್ರಗ್ಸ್ ಪೆಡ್ಲರ್ಗಳನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ 6 ತಿಂಗಳಿನಿಂದ ಮಂಗಳೂರು ಸಿಸಿಬಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಮಾಹಿತಿ ಸಂಗ್ರಹಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಹಾಗೂ ದೇಶದ ಇತರ ಕಡೆಗಳಿಗೆ MDMAಯನ್ನು ಬೃಹತ್ ಪ್ರಮಾಣದಲ್ಲಿ ವಿದೇಶಿ ಮಹಿಳಾ ಪ್ರಜೆಗಳು ವಿಮಾನ ಮಾರ್ಗದಲ್ಲಿ ಸಾಗಾಟ ಮಾಡುವ ಬಗ್ಗೆ ಮಾಹಿತಿ ದೊರೆತಿತ್ತು. ಈ ಪ್ರಕರಣದಲ್ಲಿ ಬೆಂಗಳೂರಿನ ಡ್ರಗ್ ಪೆಡ್ಲರ್ ಪೀಟರ್ಗೆ ಮಾದಕ ವಸ್ತುವನ್ನು ಸಾಗಾಟ ಮಾಡಿದ ಆರೋಪಿಗಳು ಮಾರ್ಚ್ 14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಅಂತೆಯೇ ಆರೋಪಿಗಳನ್ನು ಬಂಧಿಸಲು ಮಂಗಳೂರು ಸಿಸಿಬಿ ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಕಾರ್ಯಾಚರಣೆ ಮಾಡಿದೆ”.
“ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಪಡೆದು, ಅವರ ಬಳಿಯ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ನಲ್ಲಿ ತಂದಿದ್ದ 75 ಕೋಟಿ ಮೌಲ್ಯದ 37.878 ಕೆ.ಜಿ MDMA ಜಪ್ತಿ ಮಾಡಿಕೊಂಡಿದೆ. ಜೊತೆಗೆ 4 ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳು-2, ಪಾಸ್‌ಪೋರ್ಟ್-2, ನಗದು ಹಣ 18,460 ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದೆಹಲಿಯಿಂದ ಮಾದಕ ವಸ್ತುವಾದ MDMA ಯನ್ನು ಈ ರೀತಿ ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೀರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಈ ಆರೋಪಿಗಳು ಕಳೆದ ಒಂದು ವರ್ಷದಲ್ಲಿ 59 ಬಾರಿ ವಿದೇಶದಿಂದ ದೇಶಕ್ಕೆ ಪ್ರಯಾಣಿಸಿದ್ದು, ಈ ಸಂದರ್ಭದಲ್ಲಿ ಎಂಡಿಎಂಎ ಸಾಗಾಟ ಮಾಡಿದ್ದರೇ ಎಂಬ ಬಗ್ಗೆ ತನಿಖೆಯಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಇಷ್ಟು ಪ್ರಮಾಣದ ಎಂಡಿಎಂಎ ಸಾಗಾಟ ಮಾಡಲು ಸಾಧ್ಯವಾದ ಬಗ್ಗೆ ಪರಿಶೀಲನೆ ನಡೆಸಲಾಗುವುದು” ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.