ಗುರುವಾಯನಕೆರೆ: “ಶಿವದೂತೆ ಗುಳಿಗೆ” ಈ ಕ್ಷಣಕ್ಕೂ ಪ್ರೇಕ್ಷಕರು ಕಾತರದಿಂದ ಕಾದು ನೋಡುವ ನಾಟಕ. ನೂರಾರು ಬಾರಿ ಪ್ರದರ್ಶನಗೊಂಡರೂ ಆ ಕಥೆ, ಕಲಾವಿದರ ಪಾತ್ರ, ನಿರ್ದೇಶನ ಮತ್ತೆ, ಮತ್ತೆ ಆ ನಾಟಕವನ್ನು ನೋಡುವಂತೆ ಸೆಳೆಯುತ್ತದೆ. ಈಗ ಮತ್ತದೇ ನಾಟಕ ತಂಡ “ಛ್ರತಪತಿ ಶಿವಾಜಿ” ಹೊಚ್ಚಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ನಿಲ್ಲಲು ಸಜ್ಜಾಗಿದೆ.
ನಾಳೆ ಮಾ.08 ಶನಿವಾರ ಸಂಜೆ 7.30 ರಿಂದ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಪಟ್ಲ ಪೌಂಡೇಷನ್ ಮಹಾಪೋಷಕ, ಉದ್ಯಮಿ, ಕೊಡುಗೈದಾನಿ ಶಶಿಧರ್ ಶೆಟ್ಟಿ ನವಶಕ್ತಿ ನೇತೃತ್ವದಲ್ಲಿ ಕಲಾಸಂಗಮ ತಂಡದ ಕಲಾವಿದರಿಂದ “ಛತ್ರಪತಿ ಶಿವಾಜಿ” ನಾಟಕ ಪ್ರಥಮ ಪ್ರದರ್ಶನ ಕಾಣಲಿದೆ. ಹಿಂದೂಗಳ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವ ಛತ್ರಪತಿ ಶಿವಾಜಿಯ ಕುರಿತಾದ ಅದ್ದೂರಿ ಚಾರಿತ್ರಿಕ ಕಥೆ, ನಾಟಕ ರೂಪದಲ್ಲಿ ಅನಾವರಣಗೊಳ್ಳಲಿದೆ.
ಶಶಿರಾಜ್ ಕಾವೂರ್ ಅವರ ಕಥೆ, ಚಿತ್ರಕಥೆ ಇರುವ ಶಿವಾಜಿ ನಾಟಕಕ್ಕೆ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರ ನಿರ್ದೇಶನವಿದೆ.
ಈವರೆಗೆ ಹಿಟ್ ನಾಟಕಗಳ ಮೂಲಕ ನಾಟಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್, ಪ್ರೇಕ್ಷಕರು ಬೆರಗುಗಣ್ಣಿನಿಂದ ನೋಡುವಂತ ಕತೆಗಳನ್ನೇ ತೆರೆದಿಟ್ಟಿದ್ದಾರೆ. ಈ ಬಾರಿ ಚಾರಿತ್ರಿಕ, ಐತಿಹಾಸಿಕ ನಾಟಕದತ್ತ ಕಣ್ಣು ಹಾಯಿಸಿರುವುದು ಮತ್ತೊಂದು ದಾಖಲೆಯ ಮುನ್ಸೂಚನೆಯಂತಿದೆ.
2ಗಂಟೆ 15 ನಿಮಿಷದ ಈ ನಾಟಕದಲ್ಲಿ ಪ್ರೀತೇಶ್ ಕುಮಾರ್ ಬಳ್ಳಾಲ್ ಬಾಗ್ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾನಾಜಿ, ಬಾಳಾಜಿ, ಸೋನಾಜಿ, ಜೀಜಾಬಾಯಿ ಮುಂತಾದ ಪಾತ್ರಗಳೂ ಬರಲಿವೆ. ಒಟ್ಟು 13 ದೃಶ್ಯಗಳಿದ್ದು, ಸಿನಿಮಾ ಶೈಲಿಯಲ್ಲೇ ಈ ನಾಟಕ ಪ್ರದರ್ಶನ ಕಾಣಲಿದೆ.
ಮಾಹಿತಿ ಪ್ರಕಾರ, ಈಗಾಗಲೇ ಸುಮಾರು 60ಕ್ಕೂ ಹೆಚ್ಚು ನಾಟಕಕ್ಕೆ ಬೇಡಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಹಿಂದೂ ಸಂಘಟನೆಯವರು ಶಿವಾಜಿ ನಾಟಕದ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿದ್ದಾರೆ ಎನ್ನಲಾಗಿದೆ.