ಬೆಳ್ತಂಗಡಿ : ಅಂಡಿಂಜೆಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕಾಡ್ಗಿಚ್ಚು ಹರಡಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ ಹರಸಾಹಸ ಪಡುತ್ತಿದೆ.
ಗುಡ್ಡದ ಪೊದೆಗಳ ಮೂಲಕ ವೇಗವಾಗಿ ಬೆಂಕಿ ವ್ಯಾಪಿಸಿಕೊಳ್ಳುತ್ತಿದ್ದು, ಸುಮಾರು 70 ಎಕ್ರೆ ವ್ಯಾಪ್ತಿಯಲ್ಲಿರುವ ಸರಕಾರಿ ಗೇರು ತೋಟದ ನೂರಾರು ಹೂ, ಕಾಯಿ ಬಿಟ್ಟ ಗೇರು ಮರಗಳು ಬೆಂಕಿಗಾಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿ ಗೇರು ತೋಟದ ಸಮೀಪದಲ್ಲಿರುವ ಖಾಸಗಿ ರಬ್ಬರ್ ತೋಟಕ್ಕೂ ಬೆಂಕಿ ಹೊತ್ತಿಕೊಂಡಿದೆ.
ಗೇರುತೋಟದ ಒಳಗೆ ಅಗ್ನಿಶಾಮಕ ವಾಹನ ಸಂಚರಿಸಲು ಅನಾನುಕೂಲವಿದ್ದು ಬೆಂಕಿ ನಂದಿಸುವ ಕಾರ್ಯಾಕ್ಕೆ ಅಡಚಣೆ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅವಘಡದ ಪ್ರದೇಶಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷರು, ಸಿ.ಎ.ಬ್ಯಾಂಕ್ ಅಧ್ಯಕ್ಷರು, ಊರಿನ ಪ್ರಮುಖರು, ಮಹಿಳೆಯರು ಧಾವಿಸಿ ಬೆಂಕಿ ನಂದಿಸುವ ಕಾರ್ಯಕ್ಕೆ ಅಗ್ನಿಶಾಮಕ ಅಧಿಕಾರಿಗಳ ಜೊತೆ ಕೈಜೋಡಿಸಿದ್ದಾರೆ.
ಗೇರು ನೆಡುತೋಪಿನ ವ್ಯಾಪ್ತಿಯ ಬಹುಭಾಗ ಕಾಡಾಗಿರುವುದರಿಂದ ಬೆಂಕಿ ವ್ಯಾಪಿಸಿಕೊಂಡ ಪ್ರದೇಶಕ್ಕೆ ತಲುಪಲು ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗೆ ಕಷ್ಟವಾಗಿದ್ದು ಇನ್ನಷ್ಟು ಪೈಪ್ ಜೋಡಿಸಿ ನೀರು ಸರಬರಾಜು ಮಾಡಿ ಬೆಂಕಿ ನಂದಿಸುವ ಪ್ರಯತ್ನ ಮುಂದುವರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.