ಕೊಕ್ಕಡ : ಕಲಿಕೆಯಲ್ಲಿ ಹಿಂದುಳಿದಿರುವ ಮಗುವಿಗೆ ಹೆಚ್ಚಿನ ಮಹತ್ವ ಕೊಟ್ಟು ಆ ಮಗು ಕಲಿಕೆಯಲ್ಲಿ ಪ್ರಗತಿಯನ್ನು ಸಾಧಿಸಿದರೆ ಶಿಕ್ಷಕ ವೃತ್ತಿಯು ಸಾರ್ಥಕವಾದಂತೆ ಎಂದು ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ನುಡಿದರು.
ಕೊಕ್ಕಡದ ಸ. ಹಿ. ಪ್ರಾ. ಶಾಲೆಯಲ್ಲಿ ಕೊಕ್ಕಡ ಕ್ಲಸ್ಟರ್ ಮಟ್ಟದ ಎಫ್ ಎಲ್ ಎನ್ ವಿದ್ಯಾರ್ಥಿಗಳ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ವಿದ್ಯಾರ್ಥಿಗಳು ಎಫ್ ಎಲ್ ಎನ್ ಮಟ್ಟವನ್ನು ಸಾಧಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಶ್ರಮಿಸುವಂತಾಗಬೇಕು. ಚಟುವಟಿಕೆ ಹಾಗೂ ಪ್ರಾಯೋಗಿಕವಾಗಿ ಮಕ್ಕಳನ್ನು ಕಲಿಕೆಗೆ ತೊಡಗಿಸಿಕೊಂಡಾಗ ಕಲಿಕೆಯಲ್ಲಿ ಹಿಂದುಳಿದ ಮಗು ಗಣಿತದ ಮತ್ತು ಭಾಷಾ ವಿಷಯದ ಬಗ್ಗೆ ಆಸಕ್ತಿಯನ್ನು ಮೂಡಿಸಿಕೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಕ್ಕಡ ಗ್ರಾ. ಪಂ. ಅಧ್ಯಕ್ಷ ಬೇಬಿ ವಹಿಸಿದ್ದರು.
ವೇದಿಕೆಯಲ್ಲಿ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಸುಜಯ, ತಾಲೂಕು ಶಿಕ್ಷಣ ಸಂಯೋಜಕಿ ಚೇತನಾಾಕ್ಷಿ, ಕೊಕ್ಕಡ – ಪೆರ್ಲ ಕ್ಲಸ್ಟರ್ ನ ಸಿ ಆರ್ ಪಿ ವಿಲ್ಫ್ರೆಡ್ ಪಿಂಟೋ, ಶಿಕ್ಷಕ ಸಂಘದ ಸಂಘಟನಾ ಕಾರ್ಯದರ್ಶಿ ದಾಮೋದರ ಅಜ್ಜಾವರ, ನಿಡ್ಲೆ ಕ್ಲಸ್ಟರ್ ನ ಸಿ ಆರ್ ಪಿ ಪ್ರತಿಮಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ್, ಗ್ರಾ. ಪಂ. ಸದಸ್ಯೆ ಪವಿತ್ರ ಗುರುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಸ್ವಾಗತಿಸಿದರು, ಸಿ ಆರ್ ಪಿ ವಿಲ್ಫ್ರೆಡ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಸೌತಡ್ಕ ಶಾಲೆಯ ಸಹ ಶಿಕ್ಷಕಿ ಕಾಂತಿ ದಾಮೋದರ್ ಕಾರ್ಯಕ್ರಮ ನಿರೂಪಿಸಿದರು.