ಹಾವೇರಿ: ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ನಡೆದಿದೆ.
ಪತ್ನಿ ಹಾಗೂ ಮಕ್ಕಳನ್ನು ಊರಲ್ಲೇ ಬಿಟ್ಟು ನಾಗೇಶ ಎಂಬವರು ದುಡಿಯಲು ಬೇರೆ ಕಡೆ ಹೋಗಿದ್ದರು. ಊರಿಗೆ ಬಂದಿದ್ದ ವೇಳೆ ಪತ್ನಿ ಜೊತೆ ಹಣದ ವಿಚಾರಕ್ಕೆ ಜಗಳ ನಡೆದಿದ್ದು, ಇದರಿಂದ ಮನನೊಂದ ನಾಗೇಶ್ ತನ್ನ 10 ವರ್ಷದ ಮಗ ಹಾಗೂ 8 ವರ್ಷದ ಮಗಳನ್ನು ಊರ ಹೊರಗಡೆ ಕರೆದುಕೊಂಡು ಹೋಗಿ ಅವರಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಇನ್ನೊಂದೆಡೆ ನಾಗೇಶ್ ಕೆಲ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದರು. ಇದರಿಂದಾಗಿ ಸಾಲ ಪಾವತಿಸುವಂತೆ ಸಾಲಗಾರರು ಕಿರುಕುಳ ನೀಡಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎಂದು ಸಂಬಂಧಿಕರು ಶಂಕಿಸಿದ್ದಾರೆ.
ಸದ್ಯ ಇಬ್ಬರು ಮಕ್ಕಳನ್ನು ಹಾಗೂ ನಾಗೇಶ ಅವರನ್ನು ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.