ಚೆನ್ನೈ: ತಾಂಬರಂ ಪೂರ್ವ ರೈಲ್ವೆ ನಿಲ್ದಾಣದಲ್ಲಿ 5 ವರ್ಷದ ಬಾಲಕನೋರ್ವ ಪೋಷಕರ ಕೈಯಿಂದ ತಪ್ಪಿಸಿಕೊಂಡು, ತಪ್ಪಾದ ಬಸ್ ಹತ್ತಿ ತಬ್ಬಿಬ್ಬಾಗಿದ್ದು, ಬಸ್ ಸಿಬ್ಬಂದಿಗಳು ಕೇವಲ 40 ನಿಮಿಷದಲ್ಲಿ ಬಾಲಕನನ್ನು ಹೆತ್ತವರ ಮಡಿಲಿಗೆ ಸೇರಿಸಿದ್ದಾರೆ.
ಕುಟುಂಬವೊಂದು ಐದು ವರ್ಷದ ಬಾಲಕನ ಜೊತೆ ತಾಂಬರಂ ಪೂರ್ವ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಪೋಷಕರ ಕೈಯಿಂದ ತಪ್ಪಿಸಿಕೊಂಡ ಬಾಲಕ ರೂಟ್ ನಂ.31ಜಿ ಬಸ್ಸಿಗೆ ಹತ್ತಿದ್ದಾನೆ. ಇದಾದ ಕೆಲ ಹೊತ್ತಿನ ಬಳಿಕ ಬಸ್ಸಿನಲ್ಲಿ ತನ್ನ ಪೋಷಕರು ಇಲ್ಲದಿರುವುದನ್ನು ಕಂಡು ಬಾಲಕ ವಿಚಲಿತನಾಗಿದ್ದಾನೆ. ವಿಚಾರ ಎಂಟಿಸಿ ಬಸ್ ಚಾಲಕನಾಗಿರುವ ತಿರು ವೀರಮಣಿ ಅವರ ಗಮನಕ್ಕೆ ಬಂದು, ಕೂಡಲೇ ಅವರು ಕ್ರೋಮ್‌ಪೇಟ್-2 ಬ್ರಾಂಚ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಅವರು ತಾಂಬರಂ ಬಸ್ ನಿಲ್ದಾಣದಲ್ಲಿರುವ ತನ್ನ ಸಹದ್ಯೋಗಿಗೆ ಕರೆ ಮಾಡಿ ಬಾಲಕನ ಬಗ್ಗೆ ಮಾಹಿತಿ ನೀಡಿ ರೈಲು ನಿಲ್ದಾಣದಲ್ಲಿ ಬಾಲಕನ ಪೋಷಕರನ್ನು ಪತ್ತೆ ಹಚ್ಚುವಂತೆ ಮಾಹಿತಿ ನೀಡಿದ್ದಾರೆ.
ತಾಂಬರA ನಿಲ್ದಾಣದಲ್ಲಿದ್ದ ಸಿಬ್ಬಂದಿ ಕೂಡಲೇ ರೈಲು ನಿಲ್ದಾಣಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಈ ವೇಳೆ ರೈಲು ನಿಲ್ದಾಣದಲ್ಲಿ ಅಜ್ಜಿಯೊಬ್ಬರು ತನ್ನ ಮೊಮ್ಮಗನನ್ನು ಹುಡುಕುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ಬಸ್ ಸಿಬ್ಬಂದಿ ಅಜ್ಜಿಯ ಬಳಿ ವಿಚಾರಣೆ ನಡೆಸಿದ ವೇಳೆ ಐದು ವರ್ಷದ ಬಾಲಕ ತಪ್ಪಿಸಿಕೊಂಡಿರುವುದು ಗಮನಕ್ಕೆ ಬಂದಿರುತ್ತದೆ. ನಂತರ ರೈಲು ನಿಲ್ದಾಣದಲ್ಲಿ ಬಾಲಕನ ಹುಡುಕಾಟದಲ್ಲಿದ್ದ ಪೋಷಕರನ್ನೂ ಸಂಪರ್ಕಿಸಿ, ಬಾಲಕ ಇದ್ದ ಬಸ್ಸಿನ ಚಾಲಕ ವೀರಮಣಿ ಅವರಿಗೆ ಮಾಹಿತಿ ನೀಡಲಾಯಿತು.
ಕೇವಲ ನಲವತ್ತು ನಿಮಿಷದಲ್ಲಿ ಪೋಷಕರ ಕೈಯಿಂದ ತಪ್ಪಿಸ್ಕೊಂಡ ಬಾಲಕನನ್ನು ಪೋಷಕರ ಕೈಗೆ ಒಪ್ಪಿಸಲಾಯಿತು. ಬಾಲಕನನ್ನು ಪೋಷಕರ ಮಡಿಲಿಗೆ ಸೇರಿಸಿದ ಬಸ್ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.