ಬೀದರ್: ಎಸ್‌ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಎಟಿಎಂಗೆ ಹಾಕಲು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ತೆರಳುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದರೋಡೆ ಕೋರರು, ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಖಾರದ ಪುಡಿ ಎರಚಿ, ಭಾರೀ ಹಣ ದರೋಡೆ ಮಾಡಿದ ಘಟನೆ ನಗರದ ಶಿವಾಜಿ ಸರ್ಕಲ್ ಬಳಿಯ ಹೃದಯ ಭಾಗದಲ್ಲಿರುವ ಎಸ್‌ಬಿಐ ಬ್ಯಾಂಕ್ ಮುಂದೆ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಗಳನ್ನು ಗಿರಿ ವೆಂಕಟೇಶ್ , ಶಿವಕುಮಾರ್ (26) ಎಂದು ಗುರುತಿಸಲಾಗಿದೆ. ಶಿವಾ ಕಾಶಿನಾಥ ಎಂಬ ಸಿಬ್ಬಂದಿ ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ “ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಎಂದಿನಂತೆ ಬ್ಯಾಂಕಿನಿಂದ ಎಟಿಎಂಗೆ ಹಣ ವರ್ಗಾಯಿಸಲು ವಾಹನದಲ್ಲಿ ಬಂದಿದ್ದರು. ಆಗ ಬೈಕಿನಲ್ಲಿ ಬಂದ ಅಪರಿಚಿತರು ಹಣ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಹಣ ಕೊಡದಿದ್ದಾಗ ಆರು ಸುತ್ತು ಫೈರಿಂಗ್ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಬ್ಯಾಂಕಿನ ಕಚೇರಿ ಎದುರು ಗಿರೀಶ್ ಮೃತದೇಹ ರಕ್ತಸಿಕ್ತವಾಗಿ ಬಿದ್ದಿರುವುದು ಕಂಡುಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಶಿವಕುಮಾರ್ (26) ಅವರನ್ನು ಚಿಕಿತ್ಸೆಗಾಗಿ ಬೀದರ್ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಹ ಅಸುನೀಗಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಪ್ರದೀಪ ಗುಂಟೆ, ಅಡಿಷನಲ್ ಎಸ್‌ಪಿ ಚಂದ್ರಕಾಂತ ಪೂಜಾರಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಬ್ಯಾಂಕ್ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ದರೋಡಕೋರರಿಗಾಗಿ ಶೋಧ ಮುಂದುವರಿದಿದೆ.
ಎಟಿಎಂ ವಾಹನದಲ್ಲಿ ಒಟ್ಟು 87 ರೂ. ಲಕ್ಷ ಹಣ ಇದ್ದ ಬಗ್ಗೆ ಮಾಹಿತಿ ದೊರೆತಿದೆ. 5 ಲಕ್ಷ ರೂ. ನಗದು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. 83 ಲಕ್ಷ ರೂ. ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ.