ಮಥುರಾ : ತೆಲಂಗಾಣದ 50 ಪ್ರಯಾಣಿಕರಿದ್ದ ಖಾಸಗಿ ಬಸ್, ಪ್ರವಾಸಿ ಸೌಲಭ್ಯ ಕೇಂದ್ರಕ್ಕೆ ತೆರಳುತ್ತಿದ್ದ ವೇಳೆ ಬೆಂಕಿ ಅವಘಡ ಸಂಭವಿಸಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ ಘಟನೆ ಜ.14ರಂದು ಮಥುರಾದಲ್ಲಿ ಸಂಭವಿಸಿದೆ.
ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಲೇ ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದು, ಆದ್ರೆ ಬಸ್ಸಿನಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರು ಹೊರಬರಲು ಸಾಧ್ಯವಾಗದೇ ಒಳಗಡೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ದೌಡಾಯಿಸಿದ್ದರೂ ಅಷ್ಟೊತ್ತಿಗಾಗಲೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಬಸ್‌ನಲ್ಲಿದ್ದ ಮೃತ ಪ್ರಯಾಣಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಸಿಗರೇಟ್ ಸೇದಿದ್ದರಿಂದ ಹಠಾತ್ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.