‘ಮಗಾ ಬರಾ ಸುದ್ದಿ ಕೇಳಿ ಓಳಿಗಿ-ಹುಗ್ಗಿ ಉಂಡಂಗಾಗೈತಿ: ‘ಇವತ್ ನನ್ ವೊಟ್ಟಿ ತಣ್‌ಗಾಗ್ಯಾದ’: ನಕ್ಸಲ್ ಮಾರೆಪ್ಪ ಅಲಿಯಾಸ್ ಜಯಣ್ಣ ತಾಯಿ ಸಂತಸ

ಮಾನ್ವಿ: ಆರು ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಎದುರು ಬೆಂಗಳೂರಿನಲ್ಲಿ ಬುಧವಾರ ಶರಣಾದರು. ಈ ಬಗ್ಗೆ ತಾಲ್ಲೂಕಿನ ಅರೋಲಿ ಗ್ರಾಮದ ನಕ್ಸಲ್ ಮಾರೆಪ್ಪ ಅಲಿಯಾಸ್ ಜಯಣ್ಣ ಶರಣಾಗುತ್ತಿರುವ ಸುದ್ದಿ ಕೇಳಿ ಬುಧವಾರ ಅವರ ಕುಟುಂಬದ ಸದಸ್ಯರು ಸಂತಸ ವ್ಯಕ್ತಪಡಿಸಿದರು.

25 ವರ್ಷಗಳಿಂದ ಮನೆಯಿಂದ ದೂರ ಉಳಿದಿದ್ದ ಮಾರೆಪ್ಪ ಅರೋಲಿ ಅವರ ಭೇಟಿಗಾಗಿ ಕುಟುಂಬದ ಸದಸ್ಯರೆಲ್ಲಾ ತಡವರಿಸುತ್ತಿದ್ದು, ‘ಮಗಾ ಬರಾ ಸುದ್ದಿ ಕೇಳಿ ಓಳಿಗಿ ಹುಗ್ಗಿ ಉಂಡಂಗಾಗೈತಿ, ಇವತ್ ನನ್ ವೊಟ್ಟಿ ತಣ್‌ಗಾಗ್ಯಾದ’ ಎಂದು 80 ವರ್ಷದ ಅವರ ತಾಯಿ ಗೌರಮ್ಮ ಕಣ್ಣೀರು ಹಾಕಿದರು.

‘ಐನೂರು ರೂಪಾಯಿ ಕೊಡು ನಾನು ಓಗ್ತೀನಿ ಅಂದಿದ್ದಕ್ಕೆ ಜ್ವಾಳಾ ಮಾರಿ ಐನೂರು ಕೊಟ್ಟು ಕಳಿಸಿದ್ಯ. ಹಾಸ್ಟೆಲ್‌ಗೆ ಓಗ್ತೀನಿ ಅಂತಾ ಓದವನು ಬರಲೇ ಇಲ್ಲ’. “ನನಗಿನ್ನೂ ಸಮಾಧಾನ ಆಗಿಲ್ಲ. ನನ್ ಮಗನ್ನ ನೋಡ್ಬೇಕು. ಈ ಸಲ ಬಂದ್ರ ಇಲ್ಲೇ ನಮ್ ಜೊತಿಗಿರು, ಎಲ್ಲಿಗಿ ಹೋಗ್ಬೇಡ ಅಂತೀನಿ” ಎಂದು ಎಂದು ತಾಯಿ ಮಗನೊಂದಿಗೆ ಕಳೆದ ಕೊನೆಯ ಕ್ಷಣವನ್ನು ನೆನೆದು ಮಗನ ಬರುವಿಕೆಯ ಕಾತರತೆಯನ್ನು ಹಂಚಿಕೊಂಡಿದ್ದಾರೆ.

‘ಮಾರೆಪ್ಪ ನಾಪತ್ತೆಯಾದ ಕೆಲ ವರ್ಷಗಳ ನಂತರ ಪೊಲೀಸರು ಆಗಾಗ ಮನೆಗೆ ಬಂದು ವಿಚಾರಿಸುತ್ತಿದ್ದರಿಂದ ತಾಯಿ ಗೌರಮ್ಮ ಗಾಬರಿಗೊಳ್ಳುತ್ತಿದ್ದರು. ಈಗ ಸರ್ಕಾರ ನಮ್ಮ ತಮ್ಮ ಮನೆಗೆ ಬರುವಂತೆ ಮಾಡಿರುವುದು ನಮಗೆಲ್ಲ ಖುಷಿ, ಸಮಾಧಾನ ತಂದಿದೆ’ ಎಂದು ಮಾರೆಪ್ಪ ಅವರ ಹಿರಿಯ ಸಹೋದರ ದೇವೇಂದ್ರಪ್ಪ ತಿಳಿಸಿದರು.

ಎರಡು ಎಕರೆ ಸ್ವಂತ ಜಮೀನು ಹೊಂದಿರುವ ಬಡ ಕುಟುಂಬದ ಗೌರಮ್ಮ ಅವರ ಇಬ್ಬರು ಪುತ್ರರ ಪೈಕಿ ಮಾರೆಪ್ಪ ಕಿರಿಯ ಪುತ್ರ. ಮಕ್ಕಳು ಚಿಕ್ಕವರಿದ್ದಾಗಲೇ ಗಂಡನನ್ನು ಕಳೆದುಕೊಂಡ ಗೌರಮ್ಮ ಕೂಲಿ ಕೆಲಸ ಮಾಡಿ ಮಕ್ಕಳನ್ನು ಬೆಳೆಸಿದ್ದರು.

error: Content is protected !!