ಸಾಂದರ್ಭಿಕ ಚಿತ್ರ
ಮಂಗಳೂರು: ಬಾತ್ರೂಮ್ನಲ್ಲಿ ಸ್ನಾನ ಮಾಡುತ್ತಿದ್ದ ಬಾಲಕಿಯ ವೀಡಿಯೋ ಚಿತ್ರೀಕರಣ ಮಾಡಿದ ಪ್ರಕರಣ ಸಂಬAಧ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಎಫ್ಟಿಎಸ್ಸಿ-1 ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2024ರ ಮಾ. 10ರಂದು ಬಜಪೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಗಗನ್ (24) ಮನೆಯೊಂದರ ಕಾಂಪೌAಡ್ ಗೋಡೆಯೇರಿ ಎಕ್ಸಾಸ್ಟ್ ಫ್ಯಾನ್ ಹಾಕಲೆಂದು ಬಿಟ್ಟಿದ್ದ ಕಿಟಕಿಯಲ್ಲಿ ಸ್ನಾನ ಮಾಡುತ್ತಿದ್ದ ಬಾಲಕಿಯ ವೀಡಿಯೋವನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದಾನೆ.
ಈ ಪ್ರಕರಣ ನಡೆದು 9 ತಿಂಗಳಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದು, ಆರೋಪಿ ಚಿತ್ರೀಕರಿಸಿದ್ದ ದೃಶ್ಯಗಳನ್ನು ಡಿಲೀಟ್ ಮಾಡಿದ್ದರೂ, ಸಾಕ್ಷಿಗಳ ಹೇಳಿಕೆಯ ಆಧಾರದಲ್ಲಿ ಶಿಕ್ಷೆ ವಿಧಿಸಲಾಗಿದೆ.
ಆರೋಪಿಗೆ 1 ವರ್ಷ ಜೈಲು, 20 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದಲ್ಲಿ 10 ಸಾವಿರ ರೂ.ಗಳನ್ನು ಅಲ್ಲದೆ ಪ್ರತ್ಯೇಕವಾಗಿ 1 ಲ.ರೂ.ಗಳನ್ನು ನೊಂದ ಬಾಲಕಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶ ವಿನಯ್ ದೇವರಾಜ್ ಅವರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಬಾತ್ರೂಮ್ನ ವೀಡಿಯೋ ಚಿತ್ರೀಕರಿಸಿರುವ ಪ್ರಕರಣದ ವಿಚಾರದಲ್ಲಿ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದಾರೆ.
ವೀಡಿಯೋ ಚಿತ್ರೀಕರಿಸಿರುವ ಬಗ್ಗೆ 14 ಪ್ರಕರಣಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಬಂದಿದ್ದು ಈ ಪ್ರಕರಣಗಳಲ್ಲಿ 5 ವರ್ಷಗಳಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಬಗ್ಗೆ ನಾನಾ ಕ್ಷೇತ್ರಗಳ 6 ಮಂದಿಯ ಸಮಿತಿ ರಚಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖೀಸಿದ್ದಾರೆ.