ತೆಲಂಗಾಣ: ವಾರದ ಕಂತಾದ 200 ರೂ.ಯನ್ನು ತೀರಿಸಲಾಗದೆ ದಂಪತಿ ಆತ್ಮಹತ್ಯೆ ಮಾಡಿಕೊಂಡು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಭುಪಲಪಲ್ಲಿ ಮಂಡಲದ ಕಮಲಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಇತರೆ ಮಹಿಳೆಯರ ಜೊತೆ ಸೇರಿ ಚಂದನ (32) ಎಂಬವರು ಖಾಸಗಿ ಸಾಲಗಾರನಿಂದ ವಾರಕ್ಕೆ 200 ರೂ. ಸಾಲದ ಕಂತು ನೀಡುವುದಾಗಿ ಹೇಳಿ, 2.50 ಲಕ್ಷ ಸಾಲವನ್ನು ಪಡೆದಿದ್ದರು. ವರ್ಷಗಳ ಕಾಲ ಸಾಲವನ್ನು ಕಟ್ಟುತ್ತಿದ್ದ ಚಂದನ ಕಳೆದ ಕೆಲವು ತಿಂಗಳಿನಿಂದ ಗಂಡ ಮತ್ತು ಮಕ್ಕಳು ಅನಾರೋಗ್ಯಕ್ಕೆ ತುತ್ತಾದ ಕಾರಣ ವಾರದ ಕಂತು ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಕಂತು ಪಾವತಿ ಮಾಡದ ಹಿನ್ನೆಲೆ ಸಾಲಗಾರನ ಕಿರುಕುಳ ಕೂಡ ಹೆಚ್ಚಾಗಿದ್ದು, ಕುಟುಂಬದ ಮೇಲೆ ಆರ್ಥಿಕ ಸಂಕಷ್ಟದ ಹೊರೆ ಕೂಡ ಜಾಸ್ತಿಯಾಗಿ, ಇಬ್ಬರೂ ಮಾನಸಿಕವಾಗಿ ಕುಗ್ಗಿದ್ದರು.
ಈ ಒತ್ತಡವನ್ನು ತಾಳಲು ಕಷ್ಟವಾದ ಹಿನ್ನೆಲೆ ಡಿಸೆಂಬರ್ 6ರಂದು ಚಂದನ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣಕ್ಕೆ ಅವರನ್ನು ನೆರೆಹೊರೆಯವರ ಸಹಾಯದಿಂದ ಎಂಜಿಎA ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಂಡತಿಯ ಪರಿಸ್ಥಿತಿಯಿಂದ ಚಿಂತೆಗೆ ಒಳಗಾದ ಬನೊತ್ ದೇವೆಂದ್ರ (37) ಡಿಸೆಂಬರ್ 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಆಸ್ಪತ್ರೆಯಲ್ಲಿದ್ದ ಚಂದನ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಈ ದಂಪತಿಗೆ 14 ಮತ್ತು 12 ವರ್ಷದ ಮಕ್ಕಳಿದ್ದು, ಅವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಈಗ ತಂದೆ ತಾಯಿಗಳನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದು, ಮಕ್ಕಳಿಗೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.