ಧರ್ಮಸ್ಥಳ ಲಕ್ಷ ದೀಪೋತ್ಸವ ವೈಭವ: ಉಜಿರೆಯಿಂದ ಧರ್ಮಸ್ಥಳಕ್ಕೆ ಬೃಹತ್ ಪಾದಾಯಾತ್ರೆ: “ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಸ್ವಾಮಿಯ ಸೇವೆ”: ಡಿ. ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ: ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ತಾನು ಸಂತೋಷದಿAದ ನಿತ್ಯವೂ, ನಿರಂತರವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ನ.26ರಂದು ಲಕ್ಷದೀಪೋತ್ಸವ ಸಂದರ್ಭದಲ್ಲಿ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.


ತಮಗೆ ಸುಖ-ದುಃಖ ಮತ್ತು ಪಾಪ – ಪುಣ್ಯದ ಭಯ ಹಾಗೂ ಚಿಂತೆ ಇಲ್ಲ. ಎರಡನ್ನೂ ತಾವು ಸಮಾನವಾಗಿ ಸ್ವೀಕರಿಸಿ ಶ್ರೀ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ನಿಶ್ಚಿಂತೆಯಿAದ ಇರುತ್ತೇನೆ. ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವವೇ ತಮಗೆ ಶ್ರೀರಕ್ಷೆಯಾಗಿದೆ ಎಂದರು.
2025 ರ ಜನವರಿ 7 ಮತ್ತು 8 ರಂದು ಮಾನ್ಯ ಉಪರಾಷ್ಟ್ರಪತಿಗಳನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು ನೂತನ ಸರತಿ ಸಾಲಿನ (ಕ್ಯೂ ಕಾಂಪ್ಲೆಕ್ಸ್) ಕಟ್ಟಡವನ್ನು ಉದ್ಘಾಟಿಸುವರು. ಅಂದು 60 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗುವುದು.

ಉಡುಪಿಯಲ್ಲಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ಕಳೆದ ಕೆಲವು ವರ್ಷಗಳಿಂದ ಧರ್ಮಸ್ಥಳಕ್ಕೆ ಬೇಕಾದಷ್ಟು ಅಕ್ಕಿ, ತರಕಾರಿಗಳನ್ನು ಭಕ್ತರೇ ಕಾಣಿಕೆಯಾಗಿ ಅರ್ಪಿಸುತ್ತಿದ್ದಾರೆ. ಹಾಗಾಗಿ ತಾವು ಖರೀದಿಸುವ ಅವಶ್ಯಕತೆ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಯಾವುದೇ ಚಿಂತೆ ಮಾಡದೆ ತಾವು ಎಲ್ಲವನ್ನೂ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ ಸಂತೋಷದಿAದ ಸೇವಾಕಾರ್ಯಗಳ ಮೂಲಕ ಶ್ರೀ ಸ್ವಾಮಿ ಸೇವೆ ಮಾಡುತ್ತಿರುವುದಾಗಿ ತಿಳಿಸಿದರು.

ಲಕ್ಷದೀಪೋತ್ಸವವು ಎಲ್ಲರ ಮನೆಗಳಿಗೂ, ಮನಗಳಿಗೂ ಬೆಳಕನ್ನು ನೀಡಲಿ. ಎಲ್ಲೆಲ್ಲೂ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವುದೇ ಲಕ್ಷದೀಪೋತ್ಸವದ ಉದ್ದೇಶವಾಗಿದೆ. 12 ವರ್ಷಗಳ ಹಿಂದೆ ಉಜಿರೆಯಿಂದ ಧರ್ಮಸ್ಥಳಕ್ಕೆ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆರಂಭಿಸಿದ ಪಾದಯಾತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ಪಾದಯಾತ್ರೆಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.


ತಮ್ಮೆಲ್ಲರ ಶ್ರದ್ಧಾ-ಭಕ್ತಿಯ ಕೇಂದ್ರವಾದ ಧರ್ಮಸ್ಥಳಕ್ಕೆ ಯಾವುದೇ ರೀತಿಯಲ್ಲಿ ಅಪಚಾರ, ಅಪಪ್ರಚಾರವಾದರೂ ಎಲ್ಲರೂ ನ್ಯಾಯಾಲಯದಲ್ಲಿ ಹಾಗೂ ಜನತಾನ್ಯಾಯಾಲಯದಲ್ಲಿ ಹೋರಾಡಲು ತಾವು ಸಿದ್ಧರು ಹಾಗೂ ಬದ್ಧರು ಎಂದು ಅವರು ಭರವಸೆ ನೀಡಿದರು.


ಶಾಸಕ ಹರೀಶ್ ಪೂಂಜ ಶುಭಾಶಂಸನೆ ಮಾಡಿ ಸುಗಮ ಪಾದಯಾತ್ರೆ ಬಗ್ಗೆ ಎಲ್ಲರನ್ನೂ ಶ್ಲಾಘಿಸಿ ಅಭಿನಂದಿಸಿದರು.


ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರ ಕುಮಾರ್, ಉಜಿರೆಯ ಶರತ್‌ಕೃಷ್ಣ ಪಡ್ವೆಟ್ನಾಯ, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್‌ವರ್ಮ ಉಪಸ್ಥಿತರಿದ್ದರು.


ಬೆಳ್ತಂಗಡಿಯ ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಂದ್ರ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!