“ತಪ್ಪೆಸಗಿದ ಮಕ್ಕಳನ್ನು ಶಿಕ್ಷಿಸಲು ಅವಕಾಶ ಕೊಡಿ”: ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಯಿಂದ ಸಿಎಂಗೆ ಪತ್ರ: ವಿದ್ಯಾರ್ಥಿಗಳ ಅಸಭ್ಯ ವರ್ತನೆಯಿಂದ ಬೇಸತ್ತ ಶಿಕ್ಷಕರು

ಬೆಂಗಳೂರು: ಒಂದಷ್ಟು ವರ್ಷಗಳ ಹಿಂದೆ ಮಕ್ಕಳು  ಶಾಲೆಗಳಲ್ಲಿ ಮಕ್ಕಳು ತಪ್ಪುಮಾಡಿದಾಗ, ದುರ್ವರ್ತನೆ ತೋರಿದಾಗ ಶಿಕ್ಷಕರು ಏಟು ಕೊಟ್ಟು, ಬೈದು ಮಕ್ಕಳನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಆದರೆ ಕ್ರಮೇಣ ಶಿಕ್ಷಕರಿಗಿದ್ದ ಈ ಅಧಿಕಾರ ತೀವ್ರ ಸ್ವರೂಪ ಪಡೆದು ಮಕ್ಕಳು ಗಾಯಗೊಳ್ಳುವ ಹಾಗೆ ಏಟು ಬಿದ್ದಾಗ ಸರಕಾರವೇ ಶಾಲೆಯಲ್ಲಿ ಮಕ್ಕಳನ್ನು ಶಿಕ್ಷಿಸುವಂತಿಲ್ಲ ಎಂದು ಆದೇಶಿಸಿತು. ಆದರೆ ಈಗ ಈ ನಿಯಮದಿಂದ ಮಕ್ಕಳ ತುಂಟತನ ಹೆಚ್ಚಾಗಿ ಶಿಕ್ಷಕರಿಗೆ ತಲೆನೋವು ಹೆಚ್ಚಾಗಿದೆ. ಕೊನೆ ಪಕ್ಷ ತಪ್ಪು ಮಾಡುವ ಮಕ್ಕಳನ್ನು ಶಿಕ್ಷಿಸಲು ಅವಕಾಶ ಕೊಡಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ.

ಶಾಲಾ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ವಿದ್ಯಾರ್ಥಿಗಳು ದುರ್ವರ್ತನೆ, ಕಿರುಕುಳ, ಅಪಮಾನ, ಇತರ ಹೆಸರುಗಳನ್ನು ಇಡುವುದು, ಅವಹೇಳನ ಮಾಡುವುದು, ಅಶ್ಲೀಲವಾಗಿ ನಡೆದುಕೊಳ್ಳುವುದು ಹಲ್ಲೆ ಮಾಡುವುದು ಮುಂತಾದ ಚಟುವಟಿಕೆ ನಡೆಯುತ್ತಿದ್ದು, ಶಿಕ್ಷಕರು ಅಸಹಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ “ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ’ ಎಂದು ಹೇಳಿ ಮುಜುಗರಕ್ಕೀಡು ಮಾಡಿದ್ದ. ಈ ಪ್ರಕರಣವನ್ನು ಉಲ್ಲೇಖಿಸಿ ಪತ್ರ ಬರೆದಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಇಂತಹ ಮುಜುಗರಕ್ಕೀಡಾಗುವ ಪ್ರಸಂಗವನ್ನು ಶಿಕ್ಷಕರು ಪ್ರತೀ ದಿನ ಎದುರಿಸುತ್ತಿದ್ದು, ಈ ರೀತಿ ಕಿರುಕುಳ ನೀಡುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಬೇಕು ಎಂದು ಕೋರಿದ್ದಾರೆ.

ಇತ್ತೀಚಿನ ದಿನಗಳಲ್ಲಿ 2 ವರ್ಷದ ಮಗುವಿನ ಬಾಯಲ್ಲಿ ಅವಾಚ್ಯ ಶಬ್ದಗಳನ್ನು ಮಾತನಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇದು ಇತರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಇಂತಹ ವರ್ತನೆ ಬಗ್ಗೆಯೂ ಸರಕಾರ, ಶಿಕ್ಷಣ ಇಲಾಖೆ, ಮಕ್ಕಳ ಹಕ್ಕು ಆಯೋಗ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಒಕ್ಕೂಟ ಹೇಳಿದೆ.

ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಒಳ್ಳೆಯ ಉದ್ದೇಶದಿಂದ ಕನಿಷ್ಠ ತಿಳಿವಳಿಕೆ ಹಾಗೂ ಕ್ರಮ ತೆಗೆದುಕೊಳ್ಳುವುದು ಅಪರಾಧವಲ್ಲ ಎಂಬ ನ್ಯಾಯಾಲಯಗಳ ಅಭಿಪ್ರಾಯವನ್ನು ಪರಿಗಣಿಸಿ ಮಕ್ಕಳ ಮೇಲೆ ಕ್ರಮ ಕನಿಷ್ಠ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು. ತಪ್ಪೆಸಗಿದ ವಿದ್ಯಾರ್ಥಿಗಳಿಂದ ಕನಿಷ್ಠ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಶಿಕ್ಷಕರಿಗೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.

error: Content is protected !!