ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣ: ಕಾರ್ಕಳ ಡಿವೈಎಸ್‌ಪಿ ಅರವಿಂದ್ ಕಳಗುಜ್ಜಿ ನೇತೃತ್ವದಲ್ಲಿ ತನಿಖೆ ಆರಂಭ: ಪಶ್ಚಿಮಘಟ್ಟದ ದಟ್ಟಾರಣ್ಯದಲ್ಲಿ ಮುಂದುವರಿದ ಕೂಂಬಿಂಗ್‌

ಕಾರ್ಕಳ: ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ  ತನಿಖೆ ಚುರುಕುಗೊಂಡಿದೆ.

ಪೀತಬೈಲಿನಲ್ಲಿ ಡಿ.18ರಂದು ನಡೆದ ನಕ್ಸಲ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆ ಸಂಬAಧಿಸಿ ಕಾರ್ಕಳ ಡಿವೈಎಸ್‌ಪಿ ಅರವಿಂದ್ ಕಳಗುಜ್ಜಿ ನೇತೃತ್ವದಲ್ಲಿ ಎಲ್ಲ ಆಯಾಮಗಳಿಂದಲೂ ತನಿಖೆ ಪ್ರಕ್ರಿಯೆ ನಡೆಯುತ್ತಿದೆ.

ಎನ್‌ಕೌಂಟರ್ ವೇಳೆ ವಿಕ್ರಂಗೌಡನ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಗುಂಡು ತಗಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಸ್ಥಳದಲ್ಲಿ ಫಾರೆನ್ಸಿಕ್ ತಂಡವು ಹಲವು ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.ಹಲವರನ್ನು ಈಗಾಗಲೆ ವಿಚಾರಣೆ ನಡೆಸಲಾಗಿದ್ದು, ಮಹತ್ವದ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿದೆ. ಘಟನೆ ಸಂಬಂಧ ಕಾರ್ಯಾಚರಣೆಯಲ್ಲಿ ಭಾಗಿಯಾದ ಎಎನ್‌ಎಫ್ ಸಿಬಂದಿ ಹಾಗೂ ಅಧಿಕಾರಿಗಳನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ಕೆಲವು ನಿವಾಸಿಗಳನ್ನೂ ವಿಚಾರಣೆ ನಡೆಸಿದ್ದು, ಶನಿವಾರ ತನಿಖಾಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.

ಎನ್‌ಕೌಂಟರ್ ನಡೆದ ದಿನ ಪರಾರಿಯಾಗಿದ್ದಾರೆ ಎನ್ನಲಾದ ಮೂರ್ನಾಲ್ಕು ಮಂದಿ ನಕ್ಸಲರ ಹುಡುಕಾಟಕ್ಕೆ ಎಎನ್‌ಎಫ್ ಬಲೆ ಬೀಸಿದ್ದು, ಪಶ್ಚಿಮಘಟ್ಟದ ತಪ್ಪಲು, ದಟ್ಟಾರಣ್ಯದಲ್ಲಿ ಹದ್ದಿನ ಕಣ್ಣಿರಿಸಿದೆ. ಕಾರ್ಯಾಚರಣೆಯಲ್ಲಿ ಉಳಿದ ನಕ್ಸಲರಲ್ಲಿ ಯಾರಾದರೂ ಗಾಯಗೊಂಡಿರಬಹುದೇ? ಅವರು ಯಾವ ಕಡೆಗೆ ಪರಾರಿಯಾಗಿರಬಹುದು ಅಥವಾ ಪಶ್ಚಿಮಘಟ್ಟದ ಕಾಡಿನಲ್ಲೇ ಇರಬಹುದೇ ಎಂಬ ನಿಟ್ಟಿನಲ್ಲಿ ಗುಪ್ತಚರ ವಿಭಾಗದ ಮಾಹಿತಿ ಆಧಾರದಲ್ಲಿ ಎಎನ್‌ಎಫ್ ಕಾರ್ಯಾಚರಣೆ ರೂಪಿಸುತ್ತಿದೆ.

ಇನ್ನೊಂದೆಡೆ ಉಡುಪಿ – ದ. ಕ. ಜಿಲ್ಲೆಯ ಗಡಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕಾರ್ಕಳ, ಬೆಳ್ತಂಗಡಿ, ಹೆಬ್ರಿ, ಕುದುರೆಮುಖ, ಆಗುಂಬೆ, ಶೃಂಗೇರಿ ಸಹಿತ ಕೆಲವು ಕಡೆಗಳಲ್ಲಿ ವಿವಿಧ ತಂಡಗಳಾಗಿ ಎಎನ್‌ಎಫ್ ಶೋಧ ಮುಂದುವರಿದಿದೆ.

error: Content is protected !!