ಇಳಕಲ್ : ಹೇರ್ ಡ್ರೈಯರ್ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರಗೊಂಡ ಘಟನೆ ಇಳಕಲ್ ನಗರದಲ್ಲಿ ಘಟನೆ ನಡೆದಿದೆ.
ಮೃತ ಯೋಧನ ಪತ್ನಿ ಬಸಮ್ಮ ಅವರ ಸ್ನೇಹಿತೆ ಶಶಿಕಲಾ ಎಂಬುವರ ಮನೆಗೆ ಹೇರ್ ಡ್ರೈಯರ್ ಕೊರಿಯರ್ ಮೂಲಕ ಬಂದಿತ್ತು. ಪಾರ್ಸಲ್ ಮೇಲೆ ಶಶಿಕಲಾ ಅವರ ಮೊಬೈಲ್ ನಂಬರ್ ಇದ್ದ ಹಿನ್ನೆಲೆಯಲ್ಲಿ ಡಿಟಿಡಿಸಿ ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, “ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಕಲೆಕ್ಟ್ ಮಾಡಿ” ಎಂದಿದ್ದಾನೆ. ಈ ವೇಳೆ ಶಶಿಕಲಾ “ನಾನು ಬೇರೆ ಊರಿನಲ್ಲಿದ್ದೇನೆ” ಎಂದು ಹೇಳಿದ್ದಾರೆ. ಆದರೆ ಕೋರಿಯರ್ ಸಿಬ್ಬಂದಿ, ಪದೇ ಪದೇ ಕರೆ ಮಾಡಿದ್ದಾನೆ. ಕೋರಿಯರ್ ಸಿಬ್ಬಂದಿ ಕಾಟಕ್ಕೆ ಬೇಸತ್ತ ಶಶಿಕಲಾ ಅವರು ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ “ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊ” ಎಂದು ಹೇಳಿದ್ದಾರೆ. ಆಗ, ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್ ಪಡೆದಿದ್ದಾರೆ. ಪಾರ್ಸಲ್ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಇದೇ ವೇಳೆ ಅಲ್ಲೇ ಇದ್ದ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಎಂದಿದ್ದಾರೆ. ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಹೇರ್ ಡ್ರೈಯರ್ ಸ್ಫೋಟಗೊಂಡಿದೆ.
ಘಟನೆಯಲ್ಲಿ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ಬೆರಳುಗಳು ತುಂಡಾಗಿ ಬಿದ್ದಿದ್ದು, ಮನೆಯಲ್ಲ ರಕ್ತಮಯವಾಗಿದೆ. ಕೂಡಲೇ ಬಸಮ್ಮ ಅವರನ್ನು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಶಿಕಲಾ ಅವರು ಹೇಳುವ ಪ್ರಕಾರ, ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲವಂತೆ. ಹೀಗಾಗಿ ಅವರ ಹೆಸರಲ್ಲಿ ಹೇರ್ ಡ್ರೈಯರ್ ಪಾರ್ಸಲ್ ಹೇಗೆ ಬಂತು? ಹಣ ನೀಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಾಗಿದೆ. ಸದ್ಯ ಹೇರ್ ಡ್ರೈಯರ್ ಆಂಧ್ರದ ವಿಶಾಖಪಟ್ಟಣದಲ್ಲಿ ತಯಾರಾಗಿದೆ ಎಂದು ತಿಳುದುಬಂದಿದೆ. ಹೀಗಾಗಿ, ಈ ಸ್ಫೋಟ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.