ಬೆಳ್ತಂಗಡಿ: ಮಕ್ಕಳ ದಿನಾಚರಣೆಯ ಪ್ರಯುಕ್ತ ನ. 14 ರಂದು ಮನ್ಶರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೇರುಕಟ್ಟೆ ಹಾಗೂ ಹೋಲಿ ರಿಡೀಮರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿ ಮಕ್ಕಳು ದಯಾ ವಿಶೇಷ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿಶೇಷ ಚೇತನ ಮಕ್ಕಳೊಂದಿಗೆ ತಮ್ಮ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿಕೊಂಡರು.
ಮನ್ಶರ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಪ್ರಾಂಶುಪಾಲರಾದ ಹೈದರ್ ಮರ್ದಳ, ಸಿಬ್ಬಂದಿ ವರ್ಗದವರು ಹಾಗೂ 60 ಶಾಲಾ ಮಕ್ಕಳು ಈ ಭೇಟಿಯಲ್ಲಿ ಭಾಗವಹಿಸಿ ದಯಾ ಶಾಲೆಯ ಮಕ್ಕಳಿಗೆ ವಿವಿಧ ಕಲಿಕಾ ಸಾಮಾಗ್ರಿಗಳು ಹಾಗೂ ಆಹಾರ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.
ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೋಲಿ ರಿಡೀಮರ್ ಶಾಲೆಯ ಪ್ರಾಂಶುಪಾಲರಾದ ವಂ.ಫಾ.ಕ್ಲಿಫರ್ಡ್ ಪಿಂಟೋ, ದಯಾ ವಿಶೇಷ ಶಾಲೆಯ ಸಂಚಾಲಕರಾದ ವಂ.ಫಾ.ವಿನೋದ್ ಮಸ್ಕರೇನಸ್, ಶಾಲಾ ವಿದ್ಯಾರ್ಥಿ ಸಂಘದ ನಾಯಕರುಗಳು, ಸಿ.ಕೆ.ಎಸ್.ಕೆ ಯ ಸಹ ನಿರ್ದೇಶಕರಾದ ವಂ.ಫಾ.ರೋಹನ್ ಲೋಬೋ, ದಯಾ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ದಿವ್ಯಾ, ಶಾಲಾ ಮಕ್ಕಳ ಪ್ರತಿನಿಧಿಗಳಾದ ನಮೃತ ಮತ್ತು ಪವನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಪಂಡಿತ್ ಜವಾಹರ್ ಲಾಲ್ ನೆಹರೂರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೇಕ್ ಕತ್ತರಿಸಿ ಮಕ್ಕಳ ದಿನಾಚರಣೆಯ ಸಿಹಿಯನ್ನು ಹಂಚಿಕೊಂಡರು.
ವಂ.ಫಾ.ವಿನೋದ್ ಮಸ್ಕರೇನಸ್ ರವರು ಸರ್ವರನ್ನು ಸ್ವಾಗತಿಸಿ ದಯಾ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಶಾಲೆಯಲ್ಲಿ ದಿನಂಪ್ರತಿ ನಡೆಸಲಾಗುವ ಎಲ್ಲಾ ಚಟುವಟಿಕೆಗಳನ್ನು ವಿವರಿಸಿದರು. ವಂ.ಫಾ.ಕ್ಲಿಫರ್ಡ್ ಪಿಂಟೋರವರು ಮಾತನಾಡಿ, ದೇವರು ನಮಗೆಲ್ಲರಿಗೂ ಉತ್ತಮ ಆರೋಗ್ಯ, ಬುದ್ಧಿಶಕ್ತಿ ಹಾಗೂ ಎಲ್ಲಾ ಸವಲತ್ತುಗಳನ್ನು ನೀಡಿದರೂ ಇಂದು ನಾವು ತೃಪ್ತರಾಗಿಲ್ಲ. ದಿನಕ್ಕೊಂದು ಬೇಡಿಕೆಗಳನ್ನು ಪೋಷಕರ ಮುಂದಿಟ್ಟು ಪೋಷಕರನ್ನು ಗೋಳಾಡಿಸುತ್ತೇವೆ. ಆದರೆ ಈ ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು, ತಮ್ಮ ಜೀವನದ ಮೂಲಭೂತ ಬೇಡಿಕೆಗಳಿಗಾಗಿಯೂ ತಮ್ಮ ಪೋಷಕರು ಹಾಗೂ ಸುತ್ತಮುತ್ತಲಿರುವ ಜನರನ್ನು ಅವಲಂಬಿಸಿದ್ದು, ನಾವು ಇಂದು ಪ್ರಪಂಚದಲ್ಲಿ ನಮ್ಮಿಷ್ಟದಂತೆ ನಾವು ಅನುಭವಿಸುತ್ತಿರುವ ಎಲ್ಲಾ ಸುಖ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಾವೆಲ್ಲ ಇಂದು ಈ ಮಕ್ಕಳೊಂದಿಗೆ ನಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿರುವಾಗ, ಅವರ ಸುಖ ದುಖಃಗಳ ಒಂದು ಕಿರು ಪರಿಚಯವನ್ನು ಮಾಡಿಕೊಂಡು ಮುಂದೆ ಒಂದು ದಿನ ನಮ್ಮಿಂದ ಸಾಧ್ಯವಾದ ಸಹಾಯವನ್ನು ಸಮಾಜದಲ್ಲಿ ನಮ್ಮ ಸುತ್ತಮುತ್ತಲಿರುವ ಇಂತಹ ಮಕ್ಕಳಿಗೆ, ಜನರಿಗೆ ಸಲ್ಲಿಸಲು ಬೇಕಾಗುವ ಮನಸ್ಥಿತಿಯನ್ನು ಮಕ್ಕಳಾಗಿ, ನಾವು ಇಂದೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಹೋಲಿ ರಿಡೀಮರ್ ಹಾಗೂ ದಯಾ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ವಂ.ಫಾ.ಕ್ಲಿಫರ್ಡ್ ಪಿಂಟೋ, ಶಿಕ್ಷಕರು ಹಾಗೂ ಮಕ್ಕಳು ತಾವು ಸಂಗ್ರಹಿಸಿದ ಆಹಾರ ಸಾಮಾಗ್ರಿಗಳನ್ನು ಶಾಲೆಯ ಮಕ್ಕಳಿಗಾಗಿ ವಂ.ಫಾ.ವಿನೋದ್ ಮಸ್ಕರೇನಸ್ ರವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಹೋಲಿ ರಿಡೀಮರ್ ಶಾಲೆಯ 150 ಕ್ಕಿಂತಲೂ ಹೆಚ್ಚು ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.