ಬೆಂಗಳೂರು: ಕನ್ನಡ ಚಿತ್ರರಂಗದ ಸಿನಿಮಾದಲ್ಲಿ ನಟಿಸಿ ಸಿನಿ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ ನಟಿ ಉಮಾಶ್ರೀ ತಮ್ಮ ಬದುಕಿನ ಕರಾಳದಿನವನ್ನು ತೆರೆದಿಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಉಮಾಶ್ರೀ ತಮ್ಮ ಜೀವನದ ಕಡು ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.
‘ನನಗೆ ಚಿಕ್ಕಂದಿನಿಂದಲೇ ನಾಟಕ, ಸಿನಿಮಾದ ಅಭಿರುಚಿಯಿತ್ತು. ರಂಗಭೂಮಿ ನನಗೆ ಹೊಸ ಬದುಕು ನೀಡಿತು. 1978 ರಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದೆ. 1975 ರಲ್ಲಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಯಿತು. ಆ ಬಳಿಕ ಕೌಟುಂಬಿಕವಾಗಿ ಹಲವು ಸಂಘರ್ಷಗಳನ್ನು ಎದುರಿಸಿದೆ. ಕೂಲಿ ನಾಲಿ ಮಾಡಿ ಬುಟ್ಟಿ ಹೆಣೆದು ಜೀವನ ನಡೆಸುತ್ತಿದ್ದೆ. ಆಗ ನನಗೆ ರಂಗ ಸಂಪದದಲ್ಲಿ ಹವ್ಯಾಸಿ ಕಲಾವಿದೆಯಾಗಿ ಅವಕಾಶ ಸಿಕ್ಕಿತ್ತು. ಅಲ್ಲಿ ಸಿಗುತ್ತಿದ್ದ 50 ರೂ. ನನ್ನ ಬದುಕಿಗೆ ಅಲ್ಪ ನೆರವು ನೀಡಿತ್ತು. ಬಳಿಕ ಹಲವು ನಾಟಕಗಳಲ್ಲಿ ಅವಕಾಶ ಸಿಕ್ಕಿತು. ಉಮಾದೇವಿಯಾಗಿದ್ದ ನಾನು ಉಮಾಶ್ರೀಯಾಗಿ ಬದುಕು ಕಟ್ಟಿಕೊಂಡೆ’ ಎಂದಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಉಮಾಶ್ರೀ ಸಾಕಷ್ಟು ಕಷ್ಟಗಳನ್ನು ಕಂಡವರು. ಈ ಸಂದರ್ಭದಲ್ಲಿ ಅವರು ಹಲವು ಬಾರಿ ಸಾಯಲೂ ನಿರ್ಧರಿಸಿದ್ದರಂತೆ. ಆದರೆ ಮಕ್ಕಳಿಗಾಗಿ ಬದುಕಬೇಕು ಎಂದುಕೊಂಡು, ಒಂಟಿತನವನ್ನು ಜಯಿಸಲು ಕಲಿತೆ. ಬದುಕಿನಲ್ಲಿ ನೊಂದಿದ್ದ ನಾನು ಮದ್ಯ ಸೇವನೆ ಮಾಡುವುದನ್ನು ಕಲಿತೆ. ಆದರೆ ಈಗ ಅದನ್ನು ಬಿಟ್ಟಿದ್ದೇನೆ’ ಎಂದು ಹೇಳಿದ್ದಾರೆ.